ಯೂದನು
ಗ್ರಂಥಕರ್ತೃತ್ವ
ಗ್ರಂಥಕರ್ತನು ತನ್ನನ್ನು “ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು” ಎಂದು ಗುರುತಿಸಿಕೊಂಡಿದ್ದಾನೆ (1:1). ಈ ಯೂದನು ಬಹುಶಃ ಯೋಹಾ 14:22 ರಲ್ಲಿರುವ ಆತನ ಅಪೊಸ್ತಲರಲ್ಲಿ ಒಬ್ಬನು, “ಯೂದನು” ಎಂದು ಕರೆಯಲ್ಪಟ್ಟಂಥವನು ಆಗಿದ್ದಾನೆ. ಸಾಮಾನ್ಯವಾಗಿ ಅವನನ್ನು ಯೇಸುವಿನ ತಮ್ಮನು ಎಂದು ಭಾವಿಸಲಾಗಿದೆ. ಅವನು ಮೊದಲು ಅವಿಶ್ವಾಸಿಯಾಗಿದ್ದನು (ಯೋಹಾ 7:5), ಆದರೆ ಅವನು ಯೇಸುವಿನ ಸ್ವರ್ಗಾರೋಹಣದ ನಂತರ ತನ್ನ ತಾಯಿಯೊಂದಿಗೆ ಮತ್ತು ಇತರ ಶಿಷ್ಯರೊಂದಿಗೆ ಮೇಲಂತಸ್ತಿನ ಕೋಣೆಯಲ್ಲಿ ಕಾಣಿಸಿಕೊಂಡನು (ಅ.ಕೃ. 1:14).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60-80 ರ ನಡುವೆ ಬರೆಯಲ್ಪಟ್ಟಿದೆ.
ಅಲೆಕ್ಸಾಂಡ್ರಿಯದಿಂದ ರೋಮಾಪುರದವರೆಗಿನ ವ್ಯಾಪ್ತಿಯಲ್ಲಿರುವ ಒಂದು ಸ್ಥಳದಲ್ಲಿ ಯೂದನು ಇದನ್ನು ಬರೆದಿದ್ದಾನೆ ಎಂದು ಊಹಿಸಲಾಗಿದೆ.
ಸ್ವೀಕೃತದಾರರು
“ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ” ಎಂಬ ಸಾಮಾನ್ಯ ನುಡಿಗಟ್ಟು ಎಲ್ಲಾ ಕ್ರೈಸ್ತರನ್ನು ಸೂಚಿಸುತ್ತದೆ ಎಂದು ತೋರುತ್ತದೆ; ಆದರೂ, ಸುಳ್ಳು ಬೋಧಕರಿಗಿರುವ ಅವನ ಸಂದೇಶವನ್ನು ಪರೀಕ್ಷಿಸುವಾಗ ಅವನು ಒಂದು ನಿರ್ದಿಷ್ಟ ಗುಂಪಿಗೆ ಅಲ್ಲ ಆದರೆ ಎಲ್ಲಾ ಸುಳ್ಳು ಬೋಧಕರಿಗೆ ಸಂಬೋಧಿಸಿ ಹೇಳುತ್ತಿದ್ದಾನೆ.
ಉದ್ದೇಶ
ನಂಬಿಕೆಯಲ್ಲಿ ದೃಢವಾಗಿರಲು ಮತ್ತು ಪಾಷಂಡಮತವನ್ನು ವಿರೋಧಿಸಲು ಸ್ಥಿರ ಜಾಗರೂಕತೆಯ ಅಗತ್ಯತೆಯಿದೆ ಎಂದು ಸಭೆಯನ್ನು ನೆನಪಿಸುವುದಕ್ಕಾಗಿ ಯೂದನು ಈ ಪತ್ರಿಕೆಯನ್ನು ಬರೆದಿದ್ದಾನೆ. ಎಲ್ಲೆಡೆಯಿರುವ ಕ್ರೈಸ್ತರನ್ನು ಕಾರ್ಯಗತರಾಗುವಂತೆ ಪ್ರೇರೇಪಿಸಲು ಬರೆದಿದ್ದಾನೆ. ಅವರು ಸುಳ್ಳು ಬೋಧನೆಯ ಅಪಾಯಗಳನ್ನು ಗುರುತಿಸಬೇಕೆಂದು, ತಮ್ಮನ್ನು ಮತ್ತು ಇತರ ಭಕ್ತರನ್ನು ರಕ್ಷಿಸಿಕೊಳ್ಳಬೇಕೆಂದು ಮತ್ತು ಈಗಾಗಲೇ ವಂಚಿತರಾದವರನ್ನು ಪುನಃ ಗೆದ್ದುಕೊಳ್ಳಬೇಕೆಂದು ಅವನು ಬಯಸಿದ್ದನು. ದೇವರ ಶಿಕ್ಷೆಗೆ ಭಯಪಡದೆ ಕ್ರೈಸ್ತರು ತಮಗೆ ಇಷ್ಟವಾದ್ದದನ್ನು ಮಾಡಬಹುದು ಎಂದು ಹೇಳುತ್ತಿದ್ದ ದುಷ್ಟ ಬೋಧಕರ ವಿರುದ್ಧವಾಗಿ ಯೂದನು ಬರೆಯುತ್ತಿದ್ದಾನೆ.
ಮುಖ್ಯಾಂಶ
ನಂಬಿಕೆಗಾಗಿ ಹೋರಾಟ
ಪರಿವಿಡಿ
1. ಪೀಠಿಕೆ — 1:1-2
2. ಸುಳ್ಳು ಬೋಧಕರ ಲಕ್ಷಣ ಮತ್ತು ಗತಿ — 1:3-16
3. ಕ್ರಿಸ್ತನಲ್ಲಿರುವ ವಿಶ್ವಾಸಿಗಳಿಗೆ ಪ್ರೋತ್ಸಾಹ — 1:17-25