ಯಾಕೋಬನು
ಗ್ರಂಥಕರ್ತೃತ್ವ
ಯಾಕೋಬನು ಇದರ ಗ್ರಂಥಕರ್ತನಾಗಿದ್ದಾನೆ (1:1), ಇವನು ಯೆರೂಸಲೇಮಿನ ಸಭೆಯಲ್ಲಿ ಪ್ರಮುಖ ನಾಯಕನು ಮತ್ತು ಯೇಸುಕ್ರಿಸ್ತನ ಸಹೋದರನು ಆಗಿದ್ದನು. ಕ್ರಿಸ್ತನ ಅನೇಕ ತಮ್ಮಂದಿರ ಪೈಕಿ ಯಾಕೋಬನು ಒಬ್ಬನಾಗಿದ್ದನು, ಬಹುಶಃ ಇವನು ಅವರಲ್ಲಿ ಹಿರಿಯವನಾಗಿರಬಹುದು ಏಕೆಂದರೆ ಮತ್ತಾ 13:55 ರಲ್ಲಿರುವ ಪಟ್ಟಿಯಲ್ಲಿ ಅವನು ಮೊದಲಿಗನಾಗಿದ್ದಾನೆ. ಮೊದಲು ಅವನು ಯೇಸುವನ್ನು ನಂಬಲಿಲ್ಲ ಮತ್ತು ಅವನು ಆತನಿಗೆ ಸವಾಲುಹಾಕಿದನು ಮತ್ತು ಆತನ ನಿಯೋಗವನ್ನು ತಪ್ಪಾಗಿ ತಿಳಿದುಕೊಂಡಿದ್ದನು (ಯೋಹಾ 7:2-5). ತರುವಾಯ ಅವನು ಸಭೆಯಲ್ಲಿ ಬಹಳ ಪ್ರಮುಖನಾದನು. ಕ್ರಿಸ್ತನು ಪುನರುತ್ಥಾನದ ನಂತರ ಕಾಣಿಸಿಕೊಂಡ ಆಯ್ದ ವ್ಯಕ್ತಿಗಳಲ್ಲಿ ಇವನು ಒಬ್ಬನಾಗಿದ್ದನು (1 ಕೊರಿ 15:7), ಪೌಲನು ಇವನನ್ನು ಸಭೆಯ ಸ್ತಂಭವೆಂದು ಕರೆದನು (ಗಲಾ. 2:9).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 40-50 ರ ನಡುವೆ ಬರೆಯಲ್ಪಟ್ಟಿದೆ. ಕ್ರಿ.ಶ. 50 ರಲ್ಲಿ ಯೆರೂಸಲೇಮಿನಲ್ಲಿ ನಡೆದ ಸಮಾಲೋಚನ ಸಮಿತಿಗಿಂತ ಮುಂಚೆ ಮತ್ತು ಕ್ರಿ.ಶ. 70 ರಲ್ಲಿ ಉಂಟಾದ ದೇವಾಲಯದ ವಿನಾಶಕ್ಕಿಂತ ಮುಂಚೆ ಬರೆಯಲ್ಪಟ್ಟಿದೆ.
ಸ್ವೀಕೃತದಾರರು
ಪತ್ರಿಕೆಯ ಸ್ವೀಕೃತದಾರರು ಯೂದಾಯ ಮತ್ತು ಸಮಾರ್ಯದುದ್ದಕ್ಕೂ ಚದುರಿರುವ ಯೆಹೂದ್ಯ ವಿಶ್ವಾಸಿಗಳಾಗಿದ್ದಾರೆ. ಆದರೂ, ಯಾಕೋಬನ ಆರಂಭಿಕ ವಂದನೆಯಾದ “ಅನ್ಯದೇಶಗಳಲ್ಲಿ ಚದುರಿರುವ ಹನ್ನೆರಡು ಗೋತ್ರದವರಿಗೆ” ಎಂಬುದನ್ನು ಆಧರಿಸಿ, ಈ ಪ್ರದೇಶಗಳು ಯಾಕೋಬನ ಮೂಲ ವಾಚಕರ ಸ್ಥಳವಾಗಿರುವ ಪ್ರಬಲವಾದ ಸಾಧ್ಯತೆಗಳಾಗಿವೆ.
ಉದ್ದೇಶ
ಯಾಕೋಬನ ವ್ಯಾಪಕವಾದ ಉದ್ದೇಶವನ್ನು ಯಾಕೋ. 1:2-4 ರಲ್ಲಿ ನೋಡಬಹುದು. ಯಾಕೋಬನು ತನ್ನ ಆರಂಭಿಕ ಮಾತುಗಳಲ್ಲಿ, ತನ್ನ ಓದುಗರಿಗೆ, ನನ್ನ ಸಹೋದರ ಸಹೋದರಿಯರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ಹೇಳಿದನು, ಈ ಭಾಗವು ಯಾಕೋಬನ ಪ್ರೇಕ್ಷಕರು ನಾನಾವಿಧವಾದ ಕಷ್ಟಗಳನ್ನು ಅನುಭವಿಸುತ್ತಿದ್ದರು ಎಂದು ಸೂಚಿಸುತ್ತದೆ. ಯಾಕೋಬನು ತನ್ನ ಪ್ರೇಕ್ಷಕರಿಗೆ ದೇವರಿಂದ ಜ್ಞಾನವನ್ನು ಪಡೆದುಕೊಳ್ಳುವಂತೆ ಕರೆಕೊಟ್ಟನು (1:5), ಇದರಿಂದಾಗಿ ಅವರು ತಮ್ಮ ಕಷ್ಟಗಳಲ್ಲಿ ಆನಂದವನ್ನು ಹೊಂದಿಕೊಳ್ಳಬಹುದು. ಯಾಕೋಬನ ಪ್ರೇಕ್ಷಕರಲ್ಲಿ ನಂಬಿಕೆಯನ್ನು ಬಿಟ್ಟು ದೂರ ಹೋಗಿದ್ದ ಕೆಲವರು ಇದ್ದರು. ಲೋಕಕ್ಕೆ ಸ್ನೇಹಿತರಾಗುವುದರ ಬಗ್ಗೆ (4:4) ಯಾಕೋಬನು ಎಚ್ಚರಿಕೆ ಕೊಟ್ಟನು, ಯಾಕೋಬನು ವಿಶ್ವಾಸಿಗಳಿಗೆ ದೇವರು ತಮ್ಮನ್ನು ಮೇಲಕ್ಕೆತ್ತುವಂತೆ ತಮ್ಮನ್ನು ತಗ್ಗಿಸಿಕೊಳ್ಳಬೇಕೆಂದು ನಿರ್ದೇಶಿಸಿದನು. ದೇವರ ಮುಂದೆ ತಗ್ಗಿಸಿಕೊಳ್ಳುವುದು ಜ್ಞಾನಕ್ಕಿರುವ ಮಾರ್ಗವೆಂದು ಅವನು ಬೋಧಿಸಿದನು (4:8-10).
ಮುಖ್ಯಾಂಶ
ನಿಜವಾದ ನಂಬಿಕೆ
ಪರಿವಿಡಿ
1. ನಿಜವಾದ ದೈವಭಕ್ತಿಯ ಬಗ್ಗೆ ಯಾಕೋಬನ ನಿರ್ದೇಶನಗಳು — 1:1-27
2. ನಿಜವಾದ ನಂಬಿಕೆಯು ಒಳ್ಳೆಯ ಕಾರ್ಯಗಳಿಂದ ಪ್ರದರ್ಶಿಸಲ್ಪಡುತ್ತದೆ — 2:1-3:12
3. ನಿಜವಾದ ಜ್ಞಾನವು ದೇವರಿಂದ ಬರುತ್ತದೆ — 3:13-5:20