ಇಬ್ರಿಯರಿಗೆ
ಗ್ರಂಥಕರ್ತೃತ್ವ
ಇಬ್ರಿಯರಿಗೆ ಬರೆದ ಪತ್ರಿಕೆಯ ಗ್ರಂಥಕರ್ತನು ರಹಸ್ಯವಾಗಿಯೇ ಉಳಿದಿದ್ದಾನೆ. ಕೆಲವು ಪಂಡಿತರು ಪೌಲನನ್ನು ಗ್ರಂಥಕರ್ತನೆಂದು ಸೂಚಿಸಿದ್ದಾರೆ, ಆದರೆ ನಿಜವಾದ ಗ್ರಂಥಕರ್ತನು ಅನಾಮಧೇಯನಾಗಿ ಉಳಿದಿದ್ದಾನೆ. ಕ್ರಿಸ್ತನನ್ನು ಕ್ರೈಸ್ತತ್ವದ ಮಹಾಯಾಜಕನು, ಅರೋನನ ಯಾಜಕತ್ವಕ್ಕಿಂತಲೂ ಶ್ರೇಷ್ಠನು ಮತ್ತು ಧರ್ಮಶಾಸ್ತ್ರವನ್ನು ಹಾಗೂ ಪ್ರವಾದನೆಗಳನ್ನು ನೆರವೇರಿಸಿದವನು ಎಂದು ನಿರರ್ಗಳವಾಗಿ ವಿವರಿಸುವಂಥ ಮತ್ತೊಂದು ಪುಸ್ತಕವಿಲ್ಲ. ಈ ಪುಸ್ತಕವು ಕ್ರಿಸ್ತನನ್ನು ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಎಂದು ಸಾದರಪಡಿಸುತ್ತದೆ (ಇಬ್ರಿ. 12:2).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 64-70 ರ ನಡುವೆ ಬರೆಯಲ್ಪಟ್ಟಿದೆ.
ಇಬ್ರಿಯರಿಗೆ ಬರೆದ ಪತ್ರಿಕೆಯನ್ನು ಯೆರೂಸಲೇಮಿನಿಂದ ಬರೆಯಲಾಗಿದೆ, ಕ್ರಿಸ್ತನ ಸ್ವರ್ಗಾರೋಹಣವಾಗಿ ಸ್ವಲ್ಪ ಕಾಲವಾದ ನಂತರ ಮತ್ತು ಯೆರೂಸಲೇಮಿನ ನಾಶಕ್ಕಿಂತ ಸ್ವಲ್ಪ ಕಾಲ ಮುಂಚೆ ಬರೆಯಲಾಗಿದೆ.
ಸ್ವೀಕೃತದಾರರು
ಈ ಪತ್ರಿಕೆಯನ್ನು ಪ್ರಾಥಮಿಕವಾಗಿ ಹಳೆಯ ಒಡಂಬಡಿಕೆಯನ್ನು ಚೆನ್ನಾಗಿ ತಿಳಿದವರಾಗಿರುವ ಮತಾಂತರಿತ ಯೆಹೂದ್ಯರಿಗೆ ಮತ್ತು ಯೆಹೂದ್ಯ ಧರ್ಮಕ್ಕೆ ಹಿಂದಿರುಗಲು ಅಥವಾ ಸುವಾರ್ತೆಯನ್ನು ಯೆಹೂದ್ಯೀಕರಣಗೊಳಿಸಲು ಯತ್ನಿಸುತ್ತಿದ್ದವರಿಗೆ ಬರೆಯಲಾಗಿದೆ. “ಕ್ರಿಸ್ತ ನಂಬಿಕೆಗೆ ಬಂದ ಬಹುಮಂದಿ ಯಾಜಕರು (ಅ.ಪೊ. 6:7) ಸಹ ಇದರ ಸ್ವೀಕೃತದಾರರಾಗಿದ್ದಾರೆ ಎಂದು ಸೂಚಿಸಲಾಗಿದೆ.
ಉದ್ದೇಶ
ಸ್ಥಳೀಯ ಯೆಹೂದ್ಯ ಬೋಧನೆಗಳನ್ನು ತಿರಸ್ಕರಿಸುವಂತೆ ಮತ್ತು ಯೇಸುವಿಗೆ ನಂಬಿಗಸ್ತರಾಗಿರುವಂತೆ ತನ್ನ ವಾಚಕರನ್ನು ಉತ್ತೇಜಿಸಲು ಮತ್ತು ಯೇಸು ಕ್ರಿಸ್ತನು ಶ್ರೇಷ್ಠನು, ದೇವಕುಮಾರನು ದೇವದೂತರಿಗಿಂತ, ಯಾಜಕರಿಗಿಂತ, ಹಳೆಯ ಒಡಂಬಡಿಕೆಯ ನಾಯಕರಿಗಿಂತ, ಅಥವಾ ಯಾವುದೇ ಧರ್ಮಕ್ಕಿಂತಲೂ ಶ್ರೇಷ್ಠನು ಎಂದು ತೋರಿಸಲು ಇಬ್ರಿಯರ ಗ್ರಂಥಕರ್ತನು ಇದನ್ನು ಬರೆದನು. ಶಿಲುಬೆಯಲ್ಲಿ ಸಾಯುವ ಮೂಲಕ ಮತ್ತು ಸತ್ತವರೊಳಗಿಂದ ಎದ್ದುಬರುವ ಮೂಲಕ ಯೇಸು ವಿಶ್ವಾಸಿಗಳಿಗೆ ರಕ್ಷಣೆಯು ಮತ್ತು ನಿತ್ಯಜೀವವು ಉಂಟೆಂದು ಭರವಸೆಕೊಟ್ಟನು, ನಮ್ಮ ಪಾಪಗಳ ನಿವಾರಣೆಗಾಗಿರುವ ಕ್ರಿಸ್ತನ ಯಜ್ಞವು ಪರಿಪೂರ್ಣವಾದ್ದದು ಮತ್ತು ಸಂಪೂರ್ಣವಾದ್ದದು ಆಗಿದೆ, ನಂಬಿಕೆಯು ದೇವರಿಗೆ ಮೆಚ್ಚಿಕೆಯಾಗಿದೆ, ದೇವರಿಗೆ ವಿಧೇಯರಾಗುವ ಮೂಲಕ ನಾವು ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತೇವೆ ಎಂದು ತಿಳಿಸಲು ಇದನ್ನು ಬರೆದನು.
ಮುಖ್ಯಾಂಶ
ಕ್ರಿಸ್ತನ ಶ್ರೇಷ್ಠತೆ
ಪರಿವಿಡಿ
1. ಯೇಸು ಕ್ರಿಸ್ತನು ದೇವದೂತರಿಗಿಂತಲೂ ಶ್ರೇಷ್ಠನು — 1:1-2:18
2. ಯೇಸು ಧರ್ಮಶಾಸ್ತ್ರಕ್ಕಿಂತಲೂ ಮತ್ತು ಹಳೆಯ ಒಡಂಬಡಿಕೆಗಿಂತಲೂ ಶ್ರೇಷ್ಠನು — 3:1-10:18
3. ನಂಬಿಗಸ್ತರಾಗಿರಲು ಮತ್ತು ಸಂಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಲು ಕರೆ — 10:19-12:29
4. ಅಂತಿಮ ಪ್ರಬೋಧನೆಗಳು ಮತ್ತು ವಂದನೆಗಳು — 13:1-25