ಎಫೆಸದವರಿಗೆ
ಗ್ರಂಥಕರ್ತೃತ್ವ
ಎಫೆಸ 1:1, ಅಪೊಸ್ತಲನಾದ ಪೌಲನನ್ನು ಎಫೆಸ ಪುಸ್ತಕದ ಗ್ರಂಥಕರ್ತನೆಂದು ಗುರುತಿಸುತ್ತದೆ. ಎಫೆಸದವರಿಗೆ ಬರೆದ ಪತ್ರಿಕೆಯನ್ನು ಪೌಲನು ಬರೆದಿದ್ದಾನೆಂದು ಸಭೆಯ ಆರಂಭಿಕ ದಿನಗಳಿಂದಲೂ ಪರಿಗಣಿಸಲಾಗಿದೆ ಮತ್ತು ಆದಿ ಅಪೊಸ್ತಲಿಕ ಪಾದ್ರಿಗಳಾದ ರೋಮಾದ ಕ್ಲೆಮೆಂಟ್, ಇಗ್ನೇಷಿಯಸ್, ಹೆರ್ಮಸ್, ಮತ್ತು ಪೋಲಿಕಾರ್ಪ್ ಅದರ ಕುರಿತು ಉಲ್ಲೇಖಿಸಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ರೋಮಾಪುರದಲ್ಲಿ ಸೆರೆಮನೆಯಲ್ಲಿರುವಾಗ ಇದನ್ನು ಅವನು ಬರೆದಿದ್ದಾನೆ.
ಸ್ವೀಕೃತದಾರರು
ಎಫೆಸದ ಸಭೆಯವರು ಪ್ರಾಥಮಿಕ ಸ್ವೀಕೃತದಾರರಾಗಿದ್ದರು. ಪೌಲನು ತನ್ನ ಉದ್ದೇಶಿತ ಓದುಗರು ಅನ್ಯಜನರು ಎಂಬ ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದಾನೆ. ಎಫೆ 2:11-13 ರಲ್ಲಿ, ತನ್ನ ಓದುಗರು “ಜನ್ಮತಃ ಅನ್ಯಜನರು” ಎಂದು ಅವನು ಸ್ಪಷ್ಟವಾಗಿ ಹೇಳುತ್ತಾನೆ (2:11), ಆದ್ದರಿಂದ “ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರು” (2:12) ಎಂದು ಯೆಹೂದ್ಯರಿಂದ ಪರಿಗಣಿಸಲ್ಪಟ್ಟಿದ್ದಾರೆ. ಅದೇ ರೀತಿಯಲ್ಲಿ, ಎಫೆ 3:1 ರಲ್ಲಿ, ಪೌಲನು ತನ್ನ ಉದ್ದೇಶಿತ ಓದುಗರಿಗೆ “ಅನ್ಯಜನರಾಗಿರುವ ನಿಮ್ಮ ನಿಮಿತ್ತವಾಗಿ” ಸೆರೆಯಾಳಾಗಿದ್ದೇನೆ ಎಂದು ತಿಳಿಸುತ್ತಾನೆ.
ಉದ್ದೇಶ
ಕ್ರಿಸ್ತನ ರೀತಿಯ ಪರಿಪಕ್ವತೆಗಾಗಿ ಬಯಸುವಂಥವರೆಲ್ಲರು ಈ ಪತ್ರಿಕೆಯನ್ನು ಸ್ವೀಕರಿಸುತ್ತಾರೆಂದು ಪೌಲನು ಉದ್ದೇಶಿಸಿದ್ದನು. ದೇವರ ನಿಜವಾದ ಮಕ್ಕಳಾಗಿ ಬೆಳೆಯಲು ಬೇಕಾದ ಶಿಸ್ತನ್ನು ಎಫೆಸ ಪುಸ್ತಕದಲ್ಲಿ ಲಗತ್ತಿಸಿದ್ದಾನೆ. ಇದಲ್ಲದೆ, ಎಫೆಸ ಪತ್ರಿಕೆಯಲ್ಲಿರುವ ಅಧ್ಯಯನವು ವಿಶ್ವಾಸಿಯನ್ನು ಬಲಪಡಿಸಲು ಮತ್ತು ಸ್ಥಿರಪಡಿಸಲು ಸಹಾಯ ಮಾಡುತ್ತದೆ, ಆದ್ದರಿಂದ ದೇವರು ನೀಡಿರುವ ಉದ್ದೇಶವನ್ನು ಮತ್ತು ಕರೆಯುವಿಕೆಯನ್ನು ಅವನು ನೆರವೇರಿಸುವನು. ಎಫೆಸದ ವಿಶ್ವಾಸಿಗಳು ತಮ್ಮ ಕ್ರೈಸ್ತ ನಂಬಿಕೆಯಲ್ಲಿ ಬಲಗೊಳ್ಳಬೇಕೆಂದು ಪೌಲನು ಇಚ್ಛಿಸಿದನು, ಆದ್ದರಿಂದ ಅವನು ಸಭೆಯ ಸ್ವರೂಪವನ್ನು ಮತ್ತು ಉದ್ದೇಶವನ್ನು ವಿವರಿಸಿದನು. ಪೌಲನು ಅನ್ಯಜನರಿಂದ ಬಂದ ತನ್ನ ಕ್ರೈಸ್ತ ಓದುಗರಿಗೆ ಪರಿಚಿತರಾಗಿದ್ದ ಅವರ ಹಿಂದಿನ ಧರ್ಮಗಳಲ್ಲಿದ್ದ, ತಲೆ, ದೇಹ, ಪೂರ್ಣತೆ, ಮರ್ಮ, ಯುಗ, ಆಧಿಪತಿ, ಎಂಬ ಇತ್ಯಾದಿ ಪದಗಳನ್ನು ಎಫೆಸ ಪತ್ರಿಕೆಯಲ್ಲಿ ಬಳಸಿದ್ದಾನೆ. ಕ್ರಿಸ್ತನು ದೇವತೆಗಳ ಮತ್ತು ಆಧ್ಯಾತ್ಮಿಕ ಜೀವಿಗಳ ವರ್ಗಕ್ಕಿಂತ ಅತಿ ಉನ್ನತನಾಗಿ ಮತ್ತು ಶ್ರೇಷ್ಠನಾಗಿ ಇದ್ದಾನೆ ಎಂದು ತನ್ನ ಓದುಗರಿಗೆ ತೋರಿಸಿಕೊಡಲು ಅವನು ಈ ಪದಗಳನ್ನು ಬಳಸಿದನು.
ಮುಖ್ಯಾಂಶ
ಕ್ರಿಸ್ತನಲ್ಲಿರುವ ಆಶೀರ್ವಾದಗಳು
ಪರಿವಿಡಿ
1. ಸಭೆಯ ಸದಸ್ಯರಿಗಾಗಿರುವ ಸಿದ್ಧಾಂತಗಳು — 1:1-3:21
2. ಸಭೆಯ ಸದಸ್ಯರ ಕರ್ತವ್ಯಗಳು — 4:1-6:24