ಫಿಲಿಪ್ಪಿಯವರಿಗೆ
ಗ್ರಂಥಕರ್ತೃತ್ವ
ಪೌಲನು ಇದನ್ನು ಬರೆದಿರುವುದಾಗಿ ಹೇಳಿಕೊಳ್ಳುತ್ತಾನೆ (1:1) ಮತ್ತು ಭಾಷೆ, ಶೈಲಿ ಹಾಗೂ ಐತಿಹಾಸಿಕ ಸತ್ಯಾಂಶಗಳಂಥ ಎಲ್ಲಾ ಆಂತರಿಕ ಗುಣಲಕ್ಷಣಗಳು ಅದನ್ನು ದೃಢಪಡಿಸುತ್ತವೆ. ಪೌಲನ ಗ್ರಂಥಕರ್ತೃತ್ವ ಮತ್ತು ಅಧಿಕಾರದ ಬಗ್ಗೆ ಆದಿ ಸಭೆಗಳು ಸತತವಾಗಿ ಮಾತನಾಡುತ್ತಾ ಬಂದಿವೆ. ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯು ಕ್ರಿಸ್ತನ ಮನಸ್ಸನ್ನು ವರ್ಣಿಸುತ್ತದೆ (2:1-11). ಫಿಲಿಪ್ಪಿಯವರಿಗೆ ಪತ್ರಿಕೆಯನ್ನು ಬರೆಯುವಾಗ ಪೌಲನು ಸೆರೆಯಾಳಾಗಿದ್ದರೂ, ಅವನು ಸಂತೋಷಭರಿತನಾಗಿದ್ದನು. ಕ್ರೈಸ್ತರಾದ ನಾವು ಸಂಕಷ್ಟ ಮತ್ತು ಯಾತನೆಗಳ ನಡುವೆ ಇದ್ದರೂ ಸಹ ಸಂತೋಷವಾಗಿರಬಹುದೆಂದು ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯು ನಮಗೆ ಕಲಿಸುತ್ತದೆ. ಕ್ರಿಸ್ತನಲ್ಲಿ ನಮಗಿರುವ ನಿರೀಕ್ಷೆಯ ನಿಮಿತ್ತವಾಗಿ ನಾವು ಸಂತೋಷವುಳ್ಳವರಾಗಿದ್ದೇವೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 61 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ರೋಮಾಪುರದ ಸೆರೆಮನೆಯಲ್ಲಿದ್ದಾಗ ಅಲ್ಲಿಂದ ಈ ಪತ್ರಿಕೆಯನ್ನು ಫಿಲಿಪ್ಪಿಯವರಿಗೆ ಬರೆದನು (ಅ.ಕೃ. 28:30). ಫಿಲಿಪ್ಪಿಯ ಸಭೆಯಿಂದ ಪೌಲನಿಗೆ ಆರ್ಥಿಕ ನೆರವನ್ನು ತೆಗೆದುಕೊಂಡು ಬಂದಿದ್ದ ಎಪಫ್ರೊದೀತನಿಂದ ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯನ್ನು ಕಳುಹಿಸಿಕೊಡಬೇಕಾಗಿತ್ತು (ಫಿಲಿ. 2:25; 4:18). ಆದರೆ ಎಪಫ್ರೊದೀತನು ರೋಮಾಪುರದಲ್ಲಿದ್ದ ಸಮಯದಲ್ಲಿ, ಅನಾರೋಗ್ಯಕ್ಕೆ ತುತ್ತಾದನು, ಅದು ಅವನು ಮನೆಗೆ ವಾಪಸು ಹೋಗುವುದರಲ್ಲಿ ವಿಳಂಬವಾಗುವಂತೆ ಮಾಡಿತ್ತು ಮತ್ತು ಆದ್ದರಿಂದ ಪತ್ರಿಕೆಯ ಕೊಂಡ್ಯೊಯುವುದು ವಿಳಂಬವಾಯಿತು (2:26-27).
ಸ್ವೀಕೃತದಾರರು
ಮಕೆದೋನ್ಯದ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಫಿಲಿಪ್ಪಿಯಲ್ಲಿರುವ ಕ್ರೈಸ್ತ ಸಭೆ.
ಉದ್ದೇಶ
ಸೆರೆಮನೆಯಲ್ಲಿದ್ದ ಅವನ ವಿಷಯದಲ್ಲಿ ಕಾರ್ಯಗಳು ಹೇಗೆ ಸಾಗುತ್ತಿವೆಯೆಂದು (1:12-26) ಮತ್ತು ಅವನ ಯೋಜನೆಗಳು ಯಾವುವು, ಅವನು ಬಿಡುಗಡೆಯಾಗುವನೋ (ಫಿಲಿ. 2: 23-24) ಎಂದು ಸಭೆಯು ತಿಳಿದುಕೊಳ್ಳಬೇಕೆಂದು ಪೌಲನು ಬಯಸಿದನು. ಸಭೆಯಲ್ಲಿ ವೈಮನಸ್ಸು ಮತ್ತು ವಿಭಜನೆ ಇದೆ ಎಂದು ಕಾಣಬರುತ್ತದೆ ಆದ್ದರಿಂದ ಐಕ್ಯತೆಯ ದೃಷ್ಟಿಕೋನದಿಂದ ದೀನತೆಯನ್ನು ಪ್ರೋತ್ಸಾಹಿಸಿ ಅಪೊಸ್ತಲನು ಬರೆಯುತ್ತಿದ್ದಾನೆ (2:1-18; 4:2-3). ಸಭಾಪಾಲನಾ ದೇವತಾಶಾಸ್ತ್ರಜ್ಞನಾದ ಪೌಲನು, ನಕರಾತ್ಮಕ ಬೋಧನೆಯನ್ನು ಮತ್ತು ಕೆಲವು ಮಂದಿ ಸುಳ್ಳು ಬೋಧಕರಿಂದ ಉಂಟಾದ ದುಷ್ಪರಿಣಾಮಗಳನ್ನು (3:2-3) ಹತ್ತಿಕ್ಕಬೇಕೆಂದು ಬರೆಯುತ್ತಾನೆ, ಪೌಲನು ಸಭೆಗೆ ತಿಮೊಥೆಯನನ್ನು ಪ್ರಶಂಸಿಸಲು ಮತ್ತು ಎಪಫ್ರೊದೀತನ ಆರೋಗ್ಯ ಮತ್ತು ಯೋಜನೆಗಳ ಬಗ್ಗೆ ಸಭೆಗೆ ವರದಿ ನೀಡಲು ಬರೆದನು (2:19-30) ಮತ್ತು ಪೌಲನು ತನ್ನ ಬಗೆಗಿನ ಅವರ ಕಾಳಜಿಗೆ ಮತ್ತು ಅವರು ನೀಡಿದ ದಾನಗಳಿಗೆ (4:10-20) ಕೃತಜ್ಞತೆಯನ್ನು ತಿಳಿಸಲು ಬರೆದನು.
ಮುಖ್ಯಾಂಶ
ಸಂತೋಷಭರಿತವಾದ ಜೀವನ
ಪರಿವಿಡಿ
1. ವಂದನೆ — 1:1-2
2. ಪೌಲನ ಪರಿಸ್ಥಿತಿ ಮತ್ತು ಸಭೆಗೆ ಪ್ರೋತ್ಸಾಹ — 1:3-2:30
3. ದುರ್ಬೋಧನೆಗೆ ವಿರುದ್ಧವಾದ ಎಚ್ಚರಿಕೆಗಳು — 3:1-4:1
4. ಅಂತಿಮ ಪ್ರಬೋಧನೆಗಳು — 4:2-9
5. ಕೃತಜ್ಞತೆಗಳು — 4:10-20
6. ಅಂತಿಮ ವಂದನೆಗಳು — 4:21-23