ಜೆಕರ್ಯನು
ಗ್ರಂಥಕರ್ತೃತ್ವ
ಜೆಕರ್ಯ 1:1 ನೇ ವಚನವು “ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಅದ” ಪ್ರವಾದಿಯಾದ ಜೆಕರ್ಯನನ್ನು, ಜೆಕರ್ಯ ಪುಸ್ತಕದ ಗ್ರಂಥಕರ್ತನೆಂದು ಗುರುತಿಸುತ್ತದೆ. ಇದ್ದೋ ಹಿಂದಿರುಗಿದ ಸೆರೆವಾಸಿಗಳಲ್ಲಿದ್ದ ಯಾಜಕೀಯ ಕುಟುಂಬಗಳ ಪೈಕಿ ಒಂದು ಕುಟುಂಬದ ಮುಖ್ಯಸ್ಥನಾಗಿದ್ದನು (ನೆಹೆ 12:4,16). ಅವನ ಕುಟುಂಬವು ಯೆರೂಸಲೇಮಿಗೆ ಹಿಂದಿರುಗಿದಾಗ ಜೆಕರ್ಯನು ಯುವಕನಾಗಿದ್ದಿರಬಹುದು. ಅವನ ಕುಟುಂಬದ ವಂಶಾವಳಿಯ ನಿಮಿತ್ತ, ಜೆಕರ್ಯನು ಪ್ರವಾದಿಯಾಗಿದ್ದರ ಜೊತೆಗೆ ಯಾಜಕನು ಸಹ ಆಗಿದ್ದನು. ಹಾಗಾಗಿ ಅವನು ಪೂರ್ಣಗೊಂಡ ದೇವಾಲಯದಲ್ಲಿ ಸೇವೆ ಮಾಡದಿದ್ದರೂ ಸಹ, ಅವನಿಗೆ ಯೆಹೂದ್ಯರ ಆರಾಧನೆಯ ಆಚರಣೆಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 520-480 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬಿಲೋನಿನಲ್ಲಿನ ಸೆರೆಯಿಂದ (ಸೆರೆವಾಸ) ಹಿಂದಿರುಗಿದ ನಂತರ ಇದನ್ನು ಬರೆಯಲಾಗಿದೆ. ಪ್ರವಾದಿಯಾದ ಜೆಕರ್ಯನು 1-8 ಅಧ್ಯಾಯಗಳನ್ನು ದೇವಾಲಯದ ಪೂರ್ಣಗೊಳ್ಳುವುದಕ್ಕಿಂತ ಮುಂಚೆ ಬರೆದನು, ದೇವಾಲಯವನ್ನು ಪೂರ್ಣಗೊಳಿಸಿದ ನಂತರ 9-14 ಅಧ್ಯಾಯಗಳನ್ನು ಬರೆದನು.
ಸ್ವೀಕೃತದಾರರು
ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಜನರು ಮತ್ತು ಸೆರೆವಾಸದಿಂದ ಹಿಂದಿರುಗಿದವರು.
ಉದ್ದೇಶ
ಅವಶೇಷ ಜನಸಮುದಾಯದವರಿಗೆ ಜೆಕರ್ಯ ಪುಸ್ತಕವನ್ನು ಬರೆಯುವ ಉದ್ದೇಶವೇನೆಂದರೆ ಅವರಿಗೆ ನಿರೀಕ್ಷೆಯನ್ನು ಮತ್ತು ತಿಳುವಳಿಕೆಯನ್ನು ಕೊಡಲು ಮತ್ತು ಅವರ ಮೆಸ್ಸೀಯನ ಅಂದರೆ ಕ್ರಿಸ್ತ ಯೇಸುವಿನ ಬರೋಣವನ್ನು ಎದುರುನೋಡಲು. ದೇವರು ತನ್ನ ಜನರಿಗೆ ಬೋಧಿಸಲು, ಎಚ್ಚರಿಕೆ ನೀಡಲು ಮತ್ತು ಸರಿಪಡಿಸಲು ತನ್ನ ಪ್ರವಾದಿಗಳನ್ನು ಉಪಯೋಗಿಸಿದ್ದಾನೆ ಎಂದು ಜೆಕರ್ಯನು ಒತ್ತಿಹೇಳಿದನು. ದುರದೃಷ್ಟವಶಾತ್, ಅವರು ಕಿವಿಗೊಡಲು ನಿರಾಕರಿಸಿದರು. ಅವರ ಪಾಪವು ದೇವರ ಶಿಕ್ಷೆಗೆ ಕಾರಣವಾಯಿತು. ಪ್ರವಾದನೆಯು ದೋಷಪೂರಿತವಾಗಬಹುದು ಎಂಬ ಸಾಕ್ಷ್ಯವನ್ನು ಈ ಪುಸ್ತಕವು ನೀಡುತ್ತದೆ.
ಮುಖ್ಯಾಂಶ
ದೇವರ ಬಿಡುಗಡೆ
ಪರಿವಿಡಿ
1. ಪಶ್ಚಾತ್ತಾಪಕ್ಕಾಗಿ ಕರೆ — 1:1-6
2. ಜೆಕರ್ಯನ ದರ್ಶನಗಳು — 1:7-6:15
3. ಉಪವಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು — 7:1-8:23
4. ಭವಿಷ್ಯದ ಬಗೆಗಿನ ಹೊರೆ — 9:1-14:21