ಮೀಕನು
ಗ್ರಂಥಕರ್ತೃತ್ವ
ಮೀಕ ಪುಸ್ತಕದ ಗ್ರಂಥಕರ್ತನು ಪ್ರವಾದಿಯಾದ ಮೀಕನಾಗಿದ್ದಾನೆ (ಮೀಕ 1:1). ಮೀಕನು ಗ್ರಾಮೀಣ ಪ್ರವಾದಿಯಾಗಿದ್ದು, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅನ್ಯಾಯ ಮತ್ತು ವಿಗ್ರಹಾರಾಧನೆಯ ಪರಿಣಾಮವಾಗಿ ಉಂಟಾದ ದೇವರ ಸನ್ನಿಹಿತವಾದ ನ್ಯಾಯತೀರ್ಪಿನ ಸಂದೇಶವನ್ನು ರವಾನಿಸಲು ನಗರ ಭಾಗಕ್ಕೆ ಕಳುಹಿಸಲ್ಪಟ್ಟನು. ದೇಶದ ಅತಿದೊಡ್ಡ ಕೃಷಿ ಭಾಗದಲ್ಲಿ ನೆಲೆಸಿದ ಮೀಕನು, ತನ್ನ ದೇಶದಲ್ಲಿರುವ ಸರ್ಕಾರದ ಅಧಿಕಾರದ ಕೇಂದ್ರಗಳ ಹೊರಗಡೆ ವಾಸಿಸುತ್ತಿದ್ದನು, ಇದು ಸಮಾಜದ ದೀನ ಮತ್ತು ನಿರ್ಗತಿಕರಾದ ಊನರಾದವರ, ತಳ್ಳಲ್ಪಟ್ಟವರ ಮತ್ತು ಬಾಧೆಗೊಳಗಾದವರ ಬಗೆಗಿನ (ಮೀಕ 4:6) ಅವನ ಬಲವಾದ ಕಾಳಜಿಗೆ ಕಾರಣವಾಯಿತು. ಇಡೀ ಹಳೆಯ ಒಡಂಬಡಿಕೆಯಲ್ಲಿಯೇ ಯೇಸುಕ್ರಿಸ್ತನ ಜನನದ ಕುರಿತಾದ ಅತ್ಯಂತ ಮಹತ್ವಪೂರ್ಣವಾದ ಪ್ರವಾದನೆಗಳಲ್ಲಿ ಒಂದನ್ನು ಮೀಕನ ಪುಸ್ತಕವು ಒದಗಿಸಿಕೊಡುತ್ತದೆ. ಕ್ರಿಸ್ತನ ಜನನಕ್ಕಿಂತ ಏಳು ನೂರು ವರ್ಷಗಳ ಮುಂಚೆಯೇ, ಆತನ ಜನ್ಮಸ್ಥಳವಾದ ಬೇತ್ಲೆಹೇಮನ್ನು ಮತ್ತು ಆತನ ಶಾಶ್ವತ ಸ್ವರೂಪವನ್ನು ಸೂಚಿಸಲಾಗಿದೆ (ಮೀಕ 5:2).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 730-650 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಇಸ್ರಾಯೇಲಿನ ಉತ್ತರ ಸಾಮ್ರಾಜ್ಯದ ಪತನಕ್ಕಿಂತ ಮುಂಚೆಯೇ (1:2-7) ಮೀಕನ ಆರಂಭದ ಮಾತುಗಳು ನುಡಿಯಲ್ಪಟ್ಟವು ಎಂದು ತೋರುತ್ತದೆ. ಮೀಕ ಪುಸ್ತಕದ ಇತರ ಭಾಗಗಳು ಬಾಬಿಲೋನಿಯಾದ ಸೆರೆವಾಸದ ಸಮಯದಲ್ಲಿ ಮತ್ತು ಕೆಲವರು ಸೆರೆವಾಸದಿಂದ ಸ್ವದೇಶಕ್ಕೆ ಮರಳಿದ ನಂತರದ ಸಮಯದಲ್ಲಿ ಬರೆಯಲ್ಪಟ್ಟಿವೆ ಎಂದು ಕಂಡುಬರುತ್ತದೆ.
ಸ್ವೀಕೃತದಾರರು
ಉತ್ತರ ಇಸ್ರಾಯೇಲ್ ಉತ್ತರ ಸಾಮ್ರಾಜ್ಯ ಮತ್ತು ದಕ್ಷಿಣದ ಯೆಹೂದದ ಸಾಮ್ರಾಜ್ಯಕ್ಕೆ ಮೀಕನು ಬರೆದನು.
ಉದ್ದೇಶ
ಮೀಕನ ಪುಸ್ತಕವು ಮಹತ್ವಪೂರ್ಣವಾದ ಎರಡು ಭವಿಷ್ಯವಾಣಿಗಳ ಸುತ್ತ ಸುತ್ತುತ್ತದೆ: ಒಂದು ಇಸ್ರಾಯೇಲ್ ಮತ್ತು ಯೆಹೂದದ ನ್ಯಾಯತೀರ್ಪು (1:1-3:12), ಮತ್ತೊಂದು, ಸಹಸ್ರವರ್ಷದ ರಾಜ್ಯದಲ್ಲಿ ದೇವಜನರ ಪುನಃಸ್ಥಾಪನೆ (4:1-5:15). ದೇವರು ಅವರ ಪರವಾಗಿ ಮಾಡಿದ ತನ್ನ ಒಳ್ಳೆಯ ಕಾರ್ಯಗಳನ್ನು, ಅವರು ತಮ್ಮ ಬಗ್ಗೆ ಮಾತ್ರವೇ ಕಾಳಜಿ ವಹಿಸುತ್ತಿರುವಾಗಲೂ ಆತನು ಅವರ ಬಗ್ಗೆ ಹೇಗೆ ಕಾಳಜಿ ವಹಿಸಿದನು ಎಂಬುದನ್ನು ಜನರಿಗೆ ನೆನಪಿಸುತ್ತಾನೆ.
ಮುಖ್ಯಾಂಶ
ದೈವಿಕ ನ್ಯಾಯತೀರ್ಪು
ಪರಿವಿಡಿ
1. ದೇವರು ನ್ಯಾಯತೀರಿಸುವುದಕ್ಕಾಗಿ ಬರಲಿದ್ದಾನೆ — 1:1-2:13
2. ವಿನಾಶದ ಸಂದೇಶ — 3:1-5:15
3. ಖಂಡನೆಯ ಸಂದೇಶ — 6:1-7:10
4. ಹಿನ್ನುಡಿ — 7:11-20