ಯೋನನು
ಗ್ರಂಥಕರ್ತೃತ್ವ
ಪ್ರವಾದಿಯಾದ ಯೋನನನ್ನು ಯೋನ ಪುಸ್ತಕದ ಗ್ರಂಥಕರ್ತನೆಂದು ಯೋನ 1:1 ವಿಶೇಷವಾಗಿ ಗುರುತಿಸುತ್ತದೆ. ಯೋನನು ಗತ್-ಹೆಫೆರ್ ಎಂಬ ಊರಿನಿಂದ ಬಂದವನು, ಇದು ನಜರೇತಿನ ಬಳಿಯಲ್ಲಿರುವ ಪ್ರದೇಶದಲ್ಲಿದ್ದು, ನಂತರ ಅದು ಗಲಿಲಾಯ ಎಂದು ಅರಿಯಲ್ಪಟ್ಟಿತು (2 ಅರಸು 14:25). ಇದು ಇಸ್ರಾಯೇಲಿನ ಉತ್ತರದ ರಾಜ್ಯದಿಂದ ಬಂದಂಥ ಕೆಲವು ಪ್ರವಾದಿಗಳಲ್ಲಿ ಯೋನನನ್ನು ಒಬ್ಬನನ್ನಾಗಿ ಮಾಡುತ್ತದೆ. ಯೋನನ ಪುಸ್ತಕವು ದೇವರ ತಾಳ್ಮೆಯನ್ನು ಮತ್ತು ಪ್ರೀತಿಯನ್ನು, ಮತ್ತು ಆತನಿಗೆ ಅವಿಧೇಯರಾಗಿರುವವರಿಗೆ ಎರಡನೇ ಅವಕಾಶವನ್ನು ಕೊಡುವ ಆತನ ಇಚ್ಛೆಯನ್ನು ಎತ್ತಿತೋರಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ. ಪೂ. 793-450 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಈ ಕಥೆಯು ಇಸ್ರಾಯೇಲಿನಲ್ಲಿ ಆರಂಭವಾಗಿ, ಯೊಪ್ಪದ ಮೆಡಿಟರೇನಿಯನ್ ಬಂದರಿನವರೆಗೆ ಸಾಗುತ್ತದೆ ಮತ್ತು ಟೈಗ್ರಿಸ್ ನದಿಯ ಬಳಿಯಲ್ಲಿರುವ ಅಶ್ಶೂರ್ಯ ಸಾಮ್ರಾಜ್ಯದ ರಾಜಧಾನಿಯಾದ ನಿನವೆಯಲ್ಲಿ ಮುಕ್ತಾಯವಾಗುತ್ತದೆ.
ಸ್ವೀಕೃತದಾರರು
ಯೋನ ಪುಸ್ತಕದ ಪ್ರೇಕ್ಷಕರು ಇಸ್ರಾಯೇಲ್ ಜನರು ಮತ್ತು ಸತ್ಯವೇದದ ಭವಿಷ್ಯದ ಓದಗಾರರೆಲ್ಲರು.
ಉದ್ದೇಶ
ಅವಿಧೇಯತೆಯು ಮತ್ತು ಪುನರುಜ್ಜೀವನವು ಈ ಪುಸ್ತಕದಲ್ಲಿರುವ ಪ್ರಮುಖ ವಿಷಯಗಳಾಗಿವೆ. ತಿಮಿಂಗಿಲದ ಹೊಟ್ಟೆಯಲ್ಲಿನ ಯೋನನ ಅನುಭವವು, ಅವನು ಪಶ್ಚಾತ್ತಾಪಪಡುತ್ತಾ ವಿಶಿಷ್ಟವಾದ ಬಿಡುಗಡೆಯನ್ನು ಹೊಂದಿಕೊಳ್ಳಲು ವಿಶಿಷ್ಟವಾದ ಅವಕಾಶವನ್ನು ಅವನಿಗೆ ಒದಗಿಸಿಕೊಟ್ಟಿತು. ಅವನ ಆರಂಭಿಕ ಅವಿಧೇಯತೆಯು ಅವನ ವೈಯಕ್ತಿಕ ಉಜ್ಜೀವನಕ್ಕೆ ಮಾತ್ರವಲ್ಲ, ಆದರೆ ನಿನವೆಯರ ಉಜ್ಜೀವನಕ್ಕೂ ಸಹ ಕಾರಣವಾಯಿತು. ದೇವರ ಸಂದೇಶ ನಾವು ಇಷ್ಟಪಡುವ ಅಥವಾ ನಮ್ಮಂತೆಯೇ ಇರುವ ಜನರಿಗೆ ಮಾತ್ರವಲ್ಲ, ಆದರೆ ಆ ಸಂದೇಶವು ಇಡೀ ಪ್ರಪಂಚಕ್ಕೆ ಅನ್ವಯವಾಗುತ್ತದೆ. ದೇವರು ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ಬಯಸುತ್ತಾನೆ. ಆತನು ನಮ್ಮ ಹೃದಯ ಮತ್ತು ನಿಜವಾದ ಭಾವನೆಗಳ ಬಗ್ಗೆ ಕಾಳಜಿ ವಹಿಸುತ್ತಾನೆ ಹೊರತು, ಇತರರನ್ನು ಮೆಚ್ಚಿಸುವ ಒಳ್ಳೆಯ ಕಾರ್ಯಗಳ ಬಗ್ಗೆ ಅಲ್ಲ.
ಮುಖ್ಯಾಂಶ
ದೇವರ ಕೃಪೆಯು ಸಕಲ ಜನರಿಗೆ
ಪರಿವಿಡಿ
1. ಯೋನನ ಅವಿಧೇಯತೆ — 1:1-14
2. ದೊಡ್ಡ ಮೀನು ಯೋನನನ್ನು ನುಂಗಿದ್ದು — 1:15-16
3. ಯೋನನ ಪಶ್ಚಾತ್ತಾಪ — 1:17-2:10
4. ಯೋನನು ನಿನೆವೆಯಲ್ಲಿ ಬೋಧಿಸಿದ್ದು — 3:1-10
5. ಯೋನನು ದೇವರ ಕರುಣೆಯ ಕುರಿತು ಕೋಪಗೊಂಡಿದ್ದು — 4:1-11