ಯೆಹೋಶುವನು
ಗ್ರಂಥಕರ್ತೃತ್ವ
ಯೆಹೋಶುವನ ಪುಸ್ತಕದ ಗ್ರಂಥಕರ್ತ ಯಾರೆಂಬುದನ್ನು ಈ ಪುಸ್ತಕವು ಸ್ಪಷ್ಟವಾಗಿ ಹೆಸರಿಸುವುದಿಲ್ಲ. ಇಸ್ರಾಯೇಲಿನ ನಾಯಕನು ಮೋಶೆಯ ಉತ್ತರಾಧಿಕಾರಿಯು ಆದ ನೂನನ ಮಗನಾದ ಯೆಹೋಶುವನು ಈ ಪುಸ್ತಕದ ಹೆಚ್ಚಿನ ಭಾಗವನ್ನು ಬರೆದಿರುವ ಸಾಧ್ಯತೆಯಿದೆ. ಪುಸ್ತಕದ ಕೊನೆಯ ಭಾಗವನ್ನು ಯೆಹೋಶುವನ ಮರಣದ ನಂತರ ಕನಿಷ್ಠ ಪಕ್ಷ ಮತ್ತೊಬ್ಬ ವ್ಯಕ್ತಿಯು ಬರೆದಿರಬಹುದು. ಯೆಹೋಶುವನ ಮರಣದ ನಂತರ ಹಲವಾರು ಭಾಗಗಳನ್ನು ಪರಿಷ್ಕರಿಸಿ/ಸಂಕಲಿಸಿರುವ ಸಾಧ್ಯತೆಯಿದೆ. ಮೋಶೆಯ ಮರಣದಿಂದ ಯೆಹೋಶುವನ ನೇತೃತ್ವದಲ್ಲಿ ವಾಗ್ದತ್ತ ದೇಶವನ್ನು ಜಯಿಸುವವರೆಗಿನ ಕಾಲಾವಧಿಯನ್ನು ಈ ಪುಸ್ತಕವು ಒಳಗೊಂಡಿರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,405 - 1,385 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಹುಶಃ ಈ ಪುಸ್ತಕವನ್ನು ಯೆಹೋಶುವನು ಜಯಿಸಿದ್ದ ದೇಶವಾದ ಕಾನಾನಿನಲ್ಲಿ ರಚಿಸಿರುವ ಸಾಧ್ಯತೆಯಿದೆ.
ಸ್ವೀಕೃತದಾರರು
ಯೆಹೋಶುವನು ಇದನ್ನು ಇಸ್ರಾಯೇಲ್ ಜನರಿಗೆ ಮತ್ತು ಸತ್ಯವೇದದ ಮುಂದಿನ ಎಲ್ಲಾ ಓದುಗರಿಗೆ ಬರೆದನು.
ಉದ್ದೇಶ
ಯೆಹೋಶುವನ ಪುಸ್ತಕವು ದೇವರು ವಾಗ್ದಾನ ಮಾಡಿದ ದೇಶವನ್ನು ಜಯಿಸಲು ಮಾಡಿದ ಸೇನಾ ಕಾರ್ಯಾಚರಣೆಗಳ ಪಕ್ಷಿನೋಟವನ್ನು ನೀಡುತ್ತದೆ. ಐಗುಪ್ತದ ಬಿಡುಗಡೆಯ ನಂತರ ಮತ್ತು ನಲವತ್ತು ವರ್ಷಗಳ ಅರಣ್ಯದಲ್ಲಿನ ಅಲೆದಾಟಗಳ ನಂತರ, ಹೊಸದಾಗಿ ರೂಪುಗೊಂಡ ಜನಾಂಗವು ಈಗ ವಾಗ್ದತ್ತ ದೇಶವನ್ನು ಪ್ರವೇಶಿಸಲು, ಅದರ ನಿವಾಸಿಗಳನ್ನು ಜಯಿಸಲು ಮತ್ತು ಪ್ರದೇಶವನ್ನು ವಶಪಡಿಸಿಕೊಳ್ಳಲು ಸನ್ನದ್ಧವಾಗಿದೆ. ದೇವರು ಆದುಕೊಂಡ ಜನಾಂಗವು ಅದರ ವಾಗ್ದತ್ತ ದೇಶದಲ್ಲಿ ಒಡಂಬಡಿಕೆಯ ಅಡಿಯಲ್ಲಿ ಹೇಗೆ ನೆಲೆಗೊಂಡಿತ್ತು ಎಂಬುದನ್ನು ತೋರಿಸುವುದನ್ನು ಯೆಹೋಶುವನ ಪುಸ್ತಕವು ಮುಂದುವರಿಸುತ್ತದೆ. ಪೂರ್ವಿಕರೊಂದಿಗಿನ ಮತ್ತು ಸೀನಾಯಿಯಲ್ಲಿ ಮೊದಲು ಮಾತುಕೊಟ್ಟ ಆ ಜನಾಂಗದೊಂದಿಗಿನ ಆತನ ಒಡಂಬಡಿಕೆಗಳೊಟ್ಟಿಗಿರುವ ಯೆಹೋವನ ನಂಬಿಗಸ್ತಿಕೆಯ ಪುರಾವೆಯನ್ನು ಇಲ್ಲಿ ಕಾಣುತ್ತೇವೆ. ಈ ಪವಿತ್ರಶಾಸ್ತ್ರವು ಭವಿಷ್ಯದ ಪೀಳಿಗೆಗಳಲ್ಲಿ ಒಡಂಬಡಿಕೆಗೆ ಅನುಗುಣವಾದ ನಿಷ್ಠೆ ಮತ್ತು ಐಕ್ಯತೆ ಮತ್ತು ಉತ್ಕೃಷ್ಟ ನೈತಿಕತೆ ಉಳ್ಳವರಾಗಿರುವಂತೆ ದೇವರ ಜನರನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ನೀಡಲು ಇರುವಂಥದ್ದಾಗಿದೆ.
ಮುಖ್ಯಾಂಶ
ವಿಜಯ
ಪರಿವಿಡಿ
1. ವಾಗ್ದತ್ತ ದೇಶಕ್ಕೆ ಪ್ರವೇಶ — 1:1-5:12
2. ದೇಶದ ವಶೀಕರಣ — 5:13-12:24
3. ದೇಶದ ವಿಭಜನೆ — 13:1-21:45
4. ಕುಲಗಳ ಐಕ್ಯತೆ ಮತ್ತು ಕರ್ತನಿಗೆ ನಿಷ್ಠೆ — 22:1-24:33