ಧರ್ಮೋಪದೇಶಕಾಂಡ
ಗ್ರಂಥಕರ್ತೃತ್ವ
ಮೋಶೆಯು ಧರ್ಮೋಪದೇಶಕಾಂಡ ಗ್ರಂಥವನ್ನು ಬರೆದನು, ಇದು ವಾಸ್ತವಿಕವಾಗಿ, ಯೊರ್ದನ್ ನದಿಯನ್ನು ದಾಟುವ ಮೊದಲು ಅವನು ಇಸ್ರಾಯೇಲರಿಗೆ ಬೋಧಿಸಿದ ಧರ್ಮೋಪದೇಶಗಳ ಸಂಗ್ರಹವಾಗಿದೆ. “ಮೋಶೆಯು ಇಸ್ರಾಯೇಲ್ಯರೆಲ್ಲರಿಗೆ ಮಾಡಿದ ಉಪನ್ಯಾಸಗಳು” (1:1). ಕೊನೆಯ ಅಧ್ಯಾಯವನ್ನು ಬೇರೊಬ್ಬರು (ಪ್ರಾಯಶಃ, ಯೆಹೋಶುವನು) ಬರೆದಿರಬಹುದು. ಸ್ವತಃ ಈ ಪುಸ್ತಕವೇ ಅದರ ಹೆಚ್ಚಿನ ವಿಷಯಗಳನ್ನು ಮೋಶೆಗೆ ಸೇರಿದವುಗಳು ಎಂದು ಹೇಳುತ್ತದೆ (1:1,5; 31:24). ಮೋವಾಬ್ನ ಪ್ರಾಂತ್ಯದಲ್ಲಿ ಅಂದರೆ ಯೊರ್ದನ್ ನದಿಯು ಲವಣ ಸಮುದ್ರಕ್ಕೆ ಹರಿಯುವ ಪ್ರದೇಶದಲ್ಲಿ ಮೋಶೆ ಮತ್ತು ಇಸ್ರಾಯೇಲರು ಇದ್ದರು ಎಂದು ಧರ್ಮೋಪದೇಶಕಾಂಡವು ಹೇಳುತ್ತದೆ (1:5). ಧರ್ಮೋಪದೇಶಕಾಂಡ ಎಂದರೆ “ಎರಡನೇ ಧರ್ಮಶಾಸ್ತ್ರ.” ಇದು ದೇವರ ಮತ್ತು ಆತನ ಜನರಾದ ಇಸ್ರಾಯೇಲರ ನಡುವಿನ ಒಡಂಬಡಿಕೆಯ ಕುರಿತು ಪುನರಾವರ್ತಿಸಿ ಹೇಳುವುದಾಗಿರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,446 - 1,405 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಇಸ್ರಾಯೇಲರು ವಾಗ್ದಾನ ದೇಶವನ್ನು ಪ್ರವೇಶಿಸುವುದಕ್ಕಿಂತ ಮುಂಚಿನ 40 ದಿನಗಳ ಅವಧಿಯಲ್ಲಿ ಈ ಪುಸ್ತಕವನ್ನು ಬರೆಯಲ್ಪಟ್ಟಿರುತ್ತದೆ.
ಸ್ವೀಕೃತದಾರರು
ಅವರ ತಂದೆತಾಯಿಗಳು ಐಗುಪ್ತದ ದಾಸತ್ವದಿಂದ ಪಾರಾದ 40 ವರ್ಷಗಳ ನಂತರ ವಾಗ್ದಾನ ದೇಶವನ್ನು ಪ್ರವೇಶಿಸಲು ಸಿದ್ಧರಿದ್ದ ಇಸ್ರಾಯೇಲ್ಯರ ಹೊಸ ತಲೆಮಾರಿನವರಿಗೆ ಮತ್ತು ಮುಂದಿನ ಎಲ್ಲಾ ಸತ್ಯವೇದದ ಓದುಗರಿಗೆ ಬರೆಯಲಾಗಿರುತ್ತದೆ.
ಉದ್ದೇಶ
ಧರ್ಮೋಪದೇಶಕಾಂಡವು ದೇಶವನ್ನು ಉದ್ದೇಶಿಸಿ ಮೋಶೆಯ ವಿದಾಯ ಸಂಬೋಧನೆಯಾಗಿದೆ. ಇಸ್ರಾಯೇಲರು ವಾಗ್ದಾನ ದೇಶವನ್ನು ಪ್ರವೇಶಿಸಲು ಸನ್ನದ್ಧರಾಗಿ ನಿಂತಿದ್ದರು. ಐಗುಪ್ತದಿಂದ ಬಿಡುಗಡೆಯಾಗಿ ಹೊರಟುಬಂದ ನಲವತ್ತು ವರ್ಷಗಳ ನಂತರ, ಕಾನಾನ್ ದೇಶವನ್ನು ವಶಪಡಿಸಿಕೊಳ್ಳಲು ಆ ಜನಾಂಗವು ಯೊರ್ದನ್ ನದಿಯನ್ನು ದಾಟುವುದಕ್ಕಿದ್ದರು. ಆದಾಗ್ಯೂ, ಮೋಶೆಯು ಸಾಯುವುದಕ್ಕಿದ್ದನು ಮತ್ತು ವಾಗ್ದಾನ ದೇಶದೊಳಗೆ ಪ್ರವೇಶಿಸುವ ಜನಾಂಗದೊಂದಿಗೆ ಹೋಗುವಂತಿಲ್ಲ. ಮೋಶೆಯ ವಿದಾಯ ಸಂಬೋಧನೆಯು ಅವರು ಅವರ ಹೊಸ ದೇಶದಲ್ಲಿ ಕ್ಷೇಮದಿಂದಿರುವಂತೆ ದೇವರ ಆಜ್ಞೆಗಳಿಗೆ ವಿಧೇಯರಾಗಬೇಕೆಂಬ ಕಳಕಳಿಯ ಮನವಿಯಾಗಿದ್ದಿತ್ತು. (6:1-3, 17-19). ಅವರ ದೇವರು ಯಾರು (6:4) ಮತ್ತು ಆತನು ಅವರಿಗೆ ಏನು ಮಾಡಿದ್ದಾನೆ ಎಂದು ಈ ಸಂಬೋಧನೆಯು ಆ ಜನರಿಗೆ ನೆನಪಿಸುತ್ತದೆ (6:10-12, 20-23). ಈ ಆಜ್ಞೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಮೋಶೆಯು ಜನರನ್ನು ಬೇಡಿಕೊಳ್ಳುತ್ತಾನೆ (6:6-9).
ಮುಖ್ಯಾಂಶ
ವಿಧೇಯತೆ
ಪರಿವಿಡಿ
1. ಐಗುಪ್ತದಿಂದ ಇಸ್ರಾಯೇಲ್ಯರ ಪ್ರಯಾಣ — 1:1-3:29
2. ದೇವರೊಂದಿಗಿನ ಇಸ್ರಾಯೇಲ್ಯರ ಸಂಬಂಧ — 4:1-5:33
3. ದೇವರೊಂದಿಗಿನ ನಿಷ್ಠೆಯ ಮಹತ್ವ — 6:1-11:32
4. ದೇವರನ್ನು ಪ್ರೀತಿಸುವುದು ಮತ್ತು ಆತನ ಆಜ್ಞೆಗಳನ್ನು ಅನುಸರಿಸುವುದು ಹೇಗೆ — 12:1-26:19
5. ಆಶೀರ್ವಾದಗಳು ಮತ್ತು ಶಾಪಗಳು — 27:1-30:20
6. ಮೋಶೆಯ ಮರಣ — 31:1-34:12