ಅರಣ್ಯಕಾಂಡ
ಗ್ರಂಥಕರ್ತೃತ್ವ
ಸಾರ್ವತ್ರಿಕ ಯೆಹೂದ್ಯ ಮತ್ತು ಕ್ರೈಸ್ತ ಸಂಪ್ರದಾಯಗಳು ಅರಣ್ಯಕಾಂಡ ಪುಸ್ತಕದ ಗ್ರಂಥಕರ್ತೃತ್ವವು ಮೋಶೆಗೆ ಸೇರಿದ್ದೆನ್ನುತ್ತವೆ. ಪುಸ್ತಕವು ಅನೇಕ ಅಂಕಿಅಂಶಗಳು, ಜನಸಂಖ್ಯಾ ಎಣಿಕೆಗಳನ್ನು, ಕುಲಗಳ ಮತ್ತು ಯಾಜಕತ್ವದ ಪ್ರಮುಖ ವ್ಯಕ್ತಿಗಳನ್ನು ಮತ್ತು ಇತರ ಸಂಖ್ಯಾತ್ಮಕ ದತ್ತಾಂಶಗಳನ್ನು ಒಳಗೊಂಡಿದೆ. ಅರಣ್ಯಕಾಂಡ ಪುಸ್ತಕವು ವಿಮೋಚನೆಯಾದ ನಂತರದ 2 ನೇ ವರ್ಷದಿಂದ ಅಂದರೆ ಆ ಜನಾಂಗವು ಇನ್ನೂ ಸೀನಾಯಿ ಬೆಟ್ಟದ ಬಳಿಯಲ್ಲಿ ನೆಲೆಗೊಂಡಿರುವ ಸಮಯ ಮೊದಲುಗೊಂಡು ವಿಮೋಚನೆಯಾದ ನಂತರದ 40 ನೇ ವರ್ಷದವರೆಗೆ ಅಂದರೆ ವಾಗ್ದಾನ ದೇಶವನ್ನು ಪ್ರವೇಶಿಸಲು ಸಿದ್ಧವಾಗಿರುವ ಹೊಸ ಸಂತತಿಯವರೆಗಿರುವ 38 ವರ್ಷಗಳ ಕಾಲಾವಧಿಯನ್ನು ಒಳಗೊಂಡಿದೆ. ಇದಲ್ಲದೆ, ಈ ಪುಸ್ತಕವು ವಿಮೋಚನೆಯಾದ ನಂತರದ 2 ನೆಯ ಮತ್ತು 40 ನೆಯ ವರ್ಷಗಳಲ್ಲಿನ ಘಟನೆಗಳನ್ನು ಮಾತ್ರ ವಿವರಿಸುತ್ತದೆ, 38 ವರ್ಷಗಳ ಅಲೆದಾಡುವಿಕೆಯ ಕುರಿತು ಮೌನವಾಗಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 1,446 - 1,405 ನಡುವಿನ ಕಾಲದಲ್ಲಿ ಬರೆದಿರಬಹುದು.
ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಹೊರಟುಬಂದ ಎರಡನೆಯ ವರ್ಷದಲ್ಲಿ, ಅವರು ಸೀನಾಯಿ ಬೆಟ್ಟದಲ್ಲಿ ಪಾಳೆಯ ಹಾಕಿಕೊಂಡಿದ್ದರು ಎಂಬುದರೊಂದಿಗೆ ಪುಸ್ತಕದ ಘಟನೆಗಳು ಪ್ರಾರಂಭವಾಗುತ್ತವೆ (1:1).
ಸ್ವೀಕೃತದಾರರು
ವಾಗ್ದಾನ ದೇಶದ ಕಡೆಗಿರುವ ತಮ್ಮ ಪ್ರಯಾಣವನ್ನು ದಾಖಲಿಸಲು ಅರಣ್ಯಕಾಂಡವನ್ನು ಇಸ್ರಾಯೇಲ್ ಜನರಿಗೆ ಬರೆಯಲಾಗಿದೆ, ಆದರೆ ಭವಿಷ್ಯದಲ್ಲಿ ಸತ್ಯವೇದವನ್ನು ಓದುವವರೆಲ್ಲರಿಗೆ ನಾವು ಪರಲೋಕದ ಕಡೆಗೆ ಪ್ರಯಾಣಿಸುವಾಗ ದೇವರು ನಮ್ಮೊಂದಿಗಿದ್ದಾನೆಂದು ಇದು ನೆನಪಿಸುತ್ತದೆ.
ಉದ್ದೇಶ
ಎರಡನೆಯ ತಲೆಮಾರಿನವರು ವಾಗ್ದಾನ ದೇಶವನ್ನು (ಅರಣ್ಯಕಾಂಡ 33:2) ಪ್ರವೇಶಿಸಲು ಸಿದ್ಧರಾಗಿದ್ದಾಗ, ಆ ಸಂತಾನದವರು ದೇವರ ವಾಗ್ದಾನ ದೇಶವನ್ನು ನಂಬಿಕೆಯಿಂದ ಸ್ವಾಧೀನಮಾಡಿಕೊಳ್ಳುವಂತೆ ಪ್ರೋತ್ಸಾಹಿಸಲು ಮೋಶೆಯು ಅರಣ್ಯಕಾಂಡವನ್ನು ಬರೆದನು. ಅರಣ್ಯಕಾಂಡವು ದೇವರ ಬೇಷರತ್ತಾದ ನಂಬಿಗಸ್ತಿಕೆಯನ್ನು ಆ ಜನಾಂಗದವರಿಗೆ ತೋರಿಸುತ್ತದೆ. ಮೊದಲ ತಲೆಮಾರಿನವರು ಒಡಂಬಡಿಕೆಯ ಆಶೀರ್ವಾದವನ್ನು ತಿರಸ್ಕರಿಸಿದಾಗ್ಯೂ, ದೇವರು ಒಡಂಬಡಿಕೆಗೆ ನಂಬಿಗಸ್ತನಾಗಿದ್ದಾನೆ. ಅವರ ದೂರುಗಳ ಮತ್ತು ದ್ರೋಹವನ್ನು ಹೊರತುಪಡಿಸಿ, ಆತನು ಆ ಜನಾಂಗವನ್ನು ಆಶೀರ್ವದಿಸುತ್ತಾನೆ ಮತ್ತು ಆತನು ತನ್ನ ವಾಗ್ದಾನ ದೇಶವನ್ನು ಎರಡನೇ ತಲೆಮಾರಿನವರಿಗೆ ಕೊಟ್ಟು ವಾಗ್ದಾನವನ್ನು ನೆರವೇರಿಸುತ್ತಾನೆ.
ಮುಖ್ಯಾಂಶ
ಪ್ರಯಾಣಗಳು
ಪರಿವಿಡಿ
1. ವಾಗ್ದಾನ ದೇಶಕ್ಕೆ ಹೊರಡುವ ಸಿದ್ಧತೆ — 1:1-10:10
2. ಸೀನಾಯಿಂದ ಕಾದೇಶ್ಗೆ ಪ್ರಯಾಣ — 10:11-12:16
3. ದ್ರೋಹದ ಪರಿಣಾಮವಾಗಿ ವಿಳಂಬ — 13:1-20:13
4. ಕಾದೇಶ್ನಿಂದ ಮೋವಾಬಿನ ಬಯಲು ಪ್ರದೇಶಕ್ಕೆ ಪ್ರಯಾಣ — 20:14-22:1
5. ಮೋವಾಬಿನಲ್ಲಿರುವ ಇಸ್ರಾಯೇಲರು, ವಾಗ್ದಾನ ದೇಶವನ್ನು ಸ್ವಾಧೀನಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ — 22:2-32:42
6. ವಿವಿಧ ವಿಷಯಗಳೊಂದಿಗೆ ವ್ಯವಹರಿಸುವ ಅನುಬಂಧಗಳು — 33:1-36:13