2 ಕೊರಿಂಥದವರಿಗೆ
ಗ್ರಂಥಕರ್ತೃತ್ವ
ಪೌಲನು 2 ಕೊರಿಂಥದವರಿಗೆ ಬರೆದ ಪತ್ರಿಕೆಯನ್ನು ತನ್ನ ಜೀವನದಲ್ಲಿನ ದುರ್ಬಲ ಸಮಯದಲ್ಲಿ ಬರೆದನು. ಕೊರಿಂಥದಲ್ಲಿರುವ ಸಭೆಯು ಸೆಣಸಾಡುತ್ತಿರುವುದನ್ನು ಅವನು ಅರಿತುಕೊಂಡನು, ಆ ಸ್ಥಳೀಯ ವಿಶ್ವಾಸಿಗಳ ಸಮೂಹದ ಐಕ್ಯತೆಯನ್ನು ಕಾಪಾಡುವುದಕ್ಕಾಗಿ ಕ್ರಮ ತೆಗೆದುಕೊಳ್ಳಲು ಅವನು ಪ್ರಯತ್ನಿಸಿದನು. ಪೌಲನು ಈ ಪತ್ರಿಕೆಯನ್ನು ಬರೆದಾಗ, ಕೊರಿಂಥದಲ್ಲಿದ್ದ ವಿಶ್ವಾಸಿಗಳಿಗಾಗಿ ತನ್ನ ಪ್ರೀತಿಯ ನಿಮಿತ್ತವಾಗಿ ಅವನು ವೇದನೆಯನ್ನು ಮತ್ತು ಯಾತನೆಯನ್ನು ಅನುಭವಿಸುತ್ತಿದ್ದನು. ವೇದನೆಗಳು ಮನುಷ್ಯನ ಕಡೆಯಿಂದ ದೌರ್ಬಲ್ಯಗಳನ್ನು ತೋರಿಸುತ್ತವೆ, ಆದರೆ ದೇವರ ಕಡೆಯಿಂದ ಪೂರ್ಣತೆಯನ್ನು ತೋರಿಸುತ್ತದೆ - “ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” (2 ಕೊರಿ 12:7-10). ಈ ಪತ್ರಿಕೆಯಲ್ಲಿ ಪೌಲನು ತನ್ನ ಸೇವೆಯನ್ನು ಮತ್ತು ಅಪೊಸ್ತಲ ಅಧಿಕಾರವನ್ನು ಭಾವಾವೇಶದಿಂದ ಸಮರ್ಥಿಸಿಕೊಳ್ಳುತ್ತಾನೆ. ಅವನು ದೇವರ ಚಿತ್ತಾನುಸಾರ ಕ್ರಿಸ್ತನ ಅಪೊಸ್ತಲನಾಗಿದ್ದಾನೆಂಬುದನ್ನು ಪುನಃ ದೃಢೀಕರಿಸುವ ಮೂಲಕ ಪತ್ರಿಕೆಯನ್ನು ಪ್ರಾರಂಭಿಸುತ್ತಾನೆ (2 ಕೊರಿ 1:1). ಪೌಲನು ಬರೆದ ಈ ಪತ್ರಿಕೆಯು ಅಪೊಸ್ತಲರ ಮತ್ತು ಕ್ರೈಸ್ತ ನಂಬಿಕೆಯ ಕುರಿತು ಸಾಕಷ್ಟು ವಿಷಯವನ್ನು ತಿಳಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 55-56 ರ ನಡುವೆ ಬರೆಯಲ್ಪಟ್ಟಿದೆ.
ಕೊರಿಂಥದವರಿಗೆ ಬರೆದ ಪೌಲನ ಎರಡನೆಯ ಪತ್ರಿಕೆಯನ್ನು ಮಕೆದೋನ್ಯದಿಂದ ಬರೆಯಲಾಗಿದೆ.
ಸ್ವೀಕೃತದಾರರು
ಈ ಪತ್ರಿಕೆಯನ್ನು ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಮತ್ತು ರೋಮನ್ ಪ್ರಾಂತ್ಯವಾದ ಅಖಾಯ ಸೀಮೆಯಲ್ಲಿ ಇರುವ ದೇವಜನರೆಲ್ಲರಿಗೂ ಸಂಬೋಧಿಸಿ ಬರೆಯಲಾಗಿದೆ, ಕೊರಿಂಥವು ಆ ಪ್ರಾಂತ್ಯದ ರಾಜಧಾನಿಯಾಗಿತ್ತು (2 ಕೊರಿ 1:1).
ಉದ್ದೇಶ
ಈ ಪತ್ರಿಕೆಯನ್ನು ಬರೆಯುವುದರಲ್ಲಿ ಪೌಲನ ಮನಸ್ಸಿನಲ್ಲಿ ಅನೇಕ ಉದ್ದೇಶಗಳಿದ್ದವು, ಕೊರಿಂಥದವರು ಅವನ ನೋವಿನ ಪತ್ರಿಕೆಗೆ (1:3-4; 7:8-9; 12:13) ಅನುಕೂಲವಾಗಿ ಸ್ಪಂದಿಸಿದ್ದರಿಂದ ಪೌಲನಿಗೆ ಉಂಟಾದ ಸಾಂತ್ವನವನ್ನು ಮತ್ತು ಸಂತೋಷವನ್ನು ವ್ಯಕ್ತಪಡಿಸಲು, ಅವನು ಆಸ್ಯ ಸೀಮೆಯಲ್ಲಿ (1:8-11) ಹಾದುಹೋದ ತೊಂದರೆಯ ಬಗ್ಗೆ ಅವರಿಗೆ ತಿಳಿಸಲು, ತಪ್ಪೆಸಗಿದ ವ್ಯಕ್ತಿಯನ್ನು ಕ್ಷಮಿಸುವಂತೆ ಅವರನ್ನು ಕೇಳಿಕೊಳ್ಳಲು (2:5-11), ಅವಿಶ್ವಾಸಿಗಳೊಂದಿಗೆ ಇಜ್ಜೋಡಾಗಬೇಡಿರಿ ಎಂದು ಎಚ್ಚರಿಸಲು (6:14; 7:1), ಕ್ರೈಸ್ತ ಸೇವೆಯ (2:14-7:4) ನೈಜ ಸ್ವಭಾವವನ್ನು ಮತ್ತು ಉನ್ನತವಾದ ಕರೆಯನ್ನು ವಿವರಿಸಲು, ಕೊರಿಂಥದವರಿಗೆ ಕೊಡುವುದರಲ್ಲಿರುವ ಅನುಗ್ರಹದ ಬಗ್ಗೆ ಬೋಧಿಸಲು ಮತ್ತು ಯೆರೂಸಲೇಮಿನಲ್ಲಿರುವ ಬಡ ಕ್ರೈಸ್ತರಿಗಾಗಿ ಅವರು ಸಂಗ್ರಹಿಸುತ್ತಿದ್ದ ಧನ ಸಂಗ್ರಹವನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು (ಕೊರಿ 8-9) ಇದನ್ನು ಬರೆದನು.
ಮುಖ್ಯಾಂಶ
ಪೌಲನು ತನ್ನ ಅಪೊಸ್ತಲತ್ವವನ್ನು ಸಮರ್ಥಿಸಿಕೊಂಡಿದ್ದು.
ಪರಿವಿಡಿ
1. ತನ್ನ ಸೇವೆಯ ಕುರಿತಾದ ಪೌಲನ ವಿವರಣೆ — 1:1-7:16
2. ಯೆರೂಸಲೇಮಿನಲ್ಲಿರುವ ಬಡವರಿಗಾಗಿ ಧನ ಸಂಗ್ರಹ — 8:1-9:15
3. ಪೌಲನು ತನ್ನ ಅಧಿಕಾರವನ್ನು ಸಮರ್ಥಿಸಿಕೊಂಡಿದ್ದು — 10:1-13:10
4. ತ್ರೈಯೇಕ ದೇವರ ಆಶೀರ್ವಾದದೊಂದಿಗೆ ಸಮಾಪ್ತಿ — 13:11-14