ಯೋಹಾನನು
ಗ್ರಂಥಕರ್ತೃತ್ವ
ಜೆಬೆದಾಯನ ಮಗನಾದ ಯೋಹಾನನು ಈ ಸುವಾರ್ತೆಯ ಗ್ರಂಥಕರ್ತನು. ಇದು ಯೇಸುವಿಗೆ ಪ್ರಿಯನಾದ ಶಿಷ್ಯನ ಲೇಖನಿಯಿಂದ ಬರೆಯಲ್ಪಟ್ಟಿದೆ ಎಂದು ಯೋಹಾನ 21:20,24 ರಿಂದ ಸುಸ್ಪಷ್ಟವಾಗಿದೆ ಮತ್ತು ಯೋಹಾನನು ತನ್ನನ್ನು “ಯೇಸುವಿಗೆ ಪ್ರಿಯನಾದ ಶಿಷ್ಯನು” ಎಂದು ಪ್ರಸ್ತಾಪಿಸಿಕೊಳ್ಳುತ್ತಾನೆ. ಅವನನ್ನು ಮತ್ತು ಅವನ ಸಹೋದರ ಯಾಕೋಬನನ್ನು “ಗುಡುಗಿನ ಮರಿಗಳು” ಎಂದು ಕರೆಯಲಾಗುತ್ತಿತ್ತು (ಮಾರ್ಕ 3:17), ಅವರು ಯೇಸುವಿನ ಜೀವನದಲ್ಲಿನ ಘಟನೆಗಳನ್ನು ಕಣ್ಣಾರೆ ಕಾಣುವಂಥ ಮತ್ತು ಅದರ ಬಗ್ಗೆ ಸಾಕ್ಷಿಯ ಹೇಳುವಂಥ ವಿಶೇಷ ಭಾಗ್ಯವನ್ನು ಹೊಂದಿದ್ದವರಾಗಿದ್ದರು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 50-90 ರ ನಡುವೆ ಬರೆಯಲ್ಪಟ್ಟಿದೆ.
ಯೋಹಾನನ ಸುವಾರ್ತೆಯನ್ನು ಎಫೆಸದಿಂದ ಬರೆದಿರಬಹುದು, ಯೂದಾಯದ ಗ್ರಾಮಾಂತರ ಸೀಮೆ, ಸಮಾರ್ಯ, ಗಲಿಲಾಯ, ಬೇಥಾನ್ಯ, ಯೆರೂಸಲೇಮ್ ಬರವಣಿಗೆಯ ಪ್ರಮುಖ ಸ್ಥಳಗಳಾಗಿವೆ.
ಸ್ವೀಕೃತದಾರರು
ಯೋಹಾನನ ಸುವಾರ್ತೆಯನ್ನು ಯೆಹೂದ್ಯರಿಗೆ ಬರೆಯಲಾಯಿತು. ಯೇಸುವೇ ಮೆಸ್ಸೀಯನೆಂದು ಯೆಹೂದ್ಯರಿಗೆ ಸಾಬೀತುಪಡಿಸುವುದಕ್ಕಾಗಿ ಈ ಸುವಾರ್ತೆಯನ್ನು ಬರೆಯಲಾಯಿತು. ಅವರು ಯೇಸುವೇ ಕ್ರಿಸ್ತನೆಂದು ನಂಬುವಂತೆಯೂ ಮತ್ತು ನಂಬಿ ಆತನ ಹೆಸರಿನಲ್ಲಿ ನಿತ್ಯಜೀವವನ್ನು ಹೊಂದಿಕೊಳ್ಳುವಂತೆಯೂ ಅವನು ಈ ಮಾಹಿತಿಯನ್ನು ಒದಗಿಸಿಕೊಟ್ಟನು.
ಉದ್ದೇಶ
“ಯೇಸುವೇ ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ.” ಯೋಹಾನ 20:31 ರಲ್ಲಿ ನಿರ್ದಿಷ್ಟವಾಗಿ ಹೇಳಿರುವಂತೆಯೇ ಕ್ರೈಸ್ತರನ್ನು ನಂಬಿಕೆಯಲ್ಲಿ ದೃಢಪಡಿಸುವುದು ಮತ್ತು ಸುಭದ್ರಗೊಳಿಸುವುದು ಯೋಹಾನನ ಸುವಾರ್ತೆಯ ಉದ್ದೇಶವಾಗಿದೆ. ಸಮಸ್ತವನ್ನು ಸೃಷ್ಟಿಸಿದಂಥ (ಯೋಹಾ 1:3) ಯೇಸುವನ್ನು ದೇವರೆಂದು ಯೋಹಾನನು ಸ್ಪಷ್ಟವಾಗಿ ಘೋಷಿಸಿದ್ದಾನೆ (ಯೋಹಾ 1:1). ಆತನು ಬೆಳಕಾಗಿದ್ದಾನೆ (ಯೋಹಾ 1:4; 8:12) ಮತ್ತು ಜೀವವಾಗಿದ್ದಾನೆ (ಯೋಹಾ 1:4; 5:26; 14:6). ಯೇಸು ಕ್ರಿಸ್ತನು ದೇವಕುಮಾರನೆಂದು ಸಾಬೀತುಪಡಿಸಲು ಯೋಹಾನನ ಸುವಾರ್ತೆಯು ಬರೆಯಲ್ಪಟ್ಟಿತು.
ಮುಖ್ಯಾಂಶ
ಯೇಸು - ದೇವಕುಮಾರನು
ಪರಿವಿಡಿ
1. ಯೇಸು ಜೀವ ಜನಕ — 1:1-18
2. ಪ್ರಥಮ ಶಿಷ್ಯನ ಕರೆ — 1:19-51
3. ಯೇಸುವಿನ ಸಾರ್ವಜನಿಕ ಸೇವೆ — 2:1-16:33
5. ಮಹಾಯಾಜಕನ ರೀತಿಯಲ್ಲಿನ ಪ್ರಾರ್ಥನೆ — 17:1-26
6. ಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಪುನರುತ್ಥಾನ — 18:1-20:10
7. ಪುನರುತ್ಥಾನವಾದ ನಂತರದ ಯೇಸುವಿನ ಸೇವೆ — 20:11-21:25