ಯೆಶಾಯನು
ಗ್ರಂಥಕರ್ತೃತ್ವ
ಯೆಶಾಯನ ಪುಸ್ತಕವು ಅದರ ಗ್ರಂಥಕರ್ತನಾದ ಯೆಶಾಯನ ಹೆಸರನ್ನು ಹೊಂದಿಕೊಂಡಿದೆ, ಅವನು ಒಬ್ಬ ಪ್ರವಾದಿನಿಯನ್ನು ಮದುವೆಯಾಗಿದ್ದನು, ಆಕೆಯು ಅವನಿಗೆ ಕನಿಷ್ಠ ಎರಡು ಗಂಡುಮಕ್ಕಳನ್ನು ಹೆತ್ತಳು (ಯೆಶಾಯ 7:3; 8:3). ಅವನು ನಾಲ್ಕು ಯೆಹೂದ್ಯ ಅರಸರ ಆಳ್ವಿಕೆಯಡಿಯಲ್ಲಿ ಉಜ್ಜೀಯ, ಯೋತಾಮ್, ಅಹಾಜ್ ಮತ್ತು ಹಿಜ್ಕೀಯನ ಆಳ್ವಿಕೆಯಲ್ಲಿ ಪ್ರವಾದಿಸಿದನು ಮತ್ತು ಬಹುಶಃ ಅವನು ಕೆಟ್ಟ ಅರಸನಾದ ಮನಸ್ಸೆಯ, ಐದನೆಯ ಅರಸನ ಆಳ್ವಿಕೆಯಡಿಯಲ್ಲಿ ಅವನ ಮರಣ ಹೊಂದಿದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 740-680 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಈ ಪುಸ್ತಕವು ಅರಸನಾದ ಉಜ್ಜೀಯನ ಆಳ್ವಿಕೆಯ ಅಂತ್ಯದಲ್ಲಿ ಮತ್ತು ಅರಸರಾದ ಯೋತಾಮ್, ಅಹಾಜ್ ಮತ್ತು ಹಿಜ್ಕೀಯನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿತು.
ಸ್ವೀಕೃತದಾರರು
ದೇವರ ಧರ್ಮಶಾಸ್ತ್ರದ ಕರ್ತವ್ಯಗಳ ಪ್ರಕಾರ ಜೀವಿಸಲು ವಿಫಲರಾಗಿದ್ದ ಯೆಹೂದದ ಜನರು ಯೆಶಾಯನು ಸಂಬೋಧಿಸಿರುವ ಪ್ರಾಥಮಿಕ ಪ್ರೇಕ್ಷಕರಾಗಿರುತ್ತಾರೆ.
ಉದ್ದೇಶ
ಇಡೀ ಹಳೆಯ ಒಡಂಬಡಿಕೆಯಲ್ಲಿಯೇ ಯೇಸು ಕ್ರಿಸ್ತನ ಸಮಗ್ರವಾದ ಪ್ರವಾದನಾತ್ಮಕ ಚಿತ್ರಣವನ್ನು ನಮಗೆ ಒದಗಿಸುವುದು ಯೆಶಾಯನ ಉದ್ದೇಶವಾಗಿತ್ತು. ಇದು ಆತನ ಜೀವನದ ಸಂಪೂರ್ಣ ವ್ಯಾಪ್ತಿಯನ್ನು ಅಂದರೆ: ಆತನ ಆಗಮನದ ಘೋಷಣೆಯನ್ನು (ಯೆಶಾಯ 40:3-5), ಆತನ ಕನ್ನಿಕೆಯ ಜನನವನ್ನು (7:14), ಶುಭವಾರ್ತೆಯ ಆತನ ಸಾರೋಣವನ್ನು (61:1), ಆತನ ಯಜ್ಞರೂಪವಾದ ಮರಣವನ್ನು (52:13-53:12), ಮತ್ತು ಆತನ ಸ್ವಂತದವರನ್ನು ಕೊಂಡೊಯ್ಯುವುದಕ್ಕಾಗಿರುವ ಆತನ ಪುನರಾಗಮನವನ್ನು ಒಳಗೊಂಡಿದೆ (60:2-3). ಪ್ರವಾದಿಯಾದ ಯೆಶಾಯನು ಪ್ರಾಥಮಿಕವಾಗಿ ಯೆಹೂದ ರಾಜ್ಯದವರಿಗೆ ಪ್ರವಾದಿಸಲು ಕರೆಯಲ್ಪಟ್ಟನಾಗಿದ್ದನು. ಯೆಹೂದವು ಉಜ್ಜೀವನದ ಕಾಲ ಮತ್ತು ಬಂಡಾಯದ ಸಮಯಗಳ ಮೂಲಕ ಹಾದು ಹೋಗುತ್ತಿತ್ತು. ಯೆಹೂದ್ಯವು ಅಶ್ಶೂರ್ಯ ಮತ್ತು ಐಗುಪ್ತಗಳಿಂದ ನಾಶನದ ಬೆದರಿಕೆಗೆ ಒಳಗಾಗಿತ್ತು, ಆದರೆ ದೇವರ ಕರುಣೆಯ ನಿಮಿತ್ತ ಅವರು ಕಾಪಾಡಲ್ಪಟ್ಟರು. ಯೆಶಾಯನು ಪಾಪದಿಂದ ಪಶ್ಚಾತ್ತಾಪಡುವಂಥ ಮತ್ತು ಭವಿಷ್ಯದಲ್ಲಿ ದೇವರ ಬಿಡುಗಡೆಯ ಆಶಾದಾಯಕವಾದ ನಿರೀಕ್ಷೆಯ ಕುರಿತ ಸಂದೇಶವನ್ನು ಸಾರಿದನು.
ಮುಖ್ಯಾಂಶ
ರಕ್ಷಣೆ
ಪರಿವಿಡಿ
1. ಯೆಹೂದದ ಖಂಡನೆ — 1:1-12:6
2. ಇತರ ರಾಷ್ಟ್ರಗಳ ವಿರುದ್ಧ ಖಂಡನೆ — 13:1-23:18
3. ಭವಿಷ್ಯದ ಸಂಕಟ — 24:1-27:13
4. ಇಸ್ರಾಯೇಲ್ ಮತ್ತು ಯೆಹೂದದ ಖಂಡನೆ — 28:1-35:10
5. ಹಿಜ್ಕೀಯನ ಮತ್ತು ಯೆಶಾಯನ ಚರಿತ್ರೆ — 36:1-38:22
6. ಮೆಸ್ಸೀಯನ ರಕ್ಷಣೆ — 39:1-47:15
7. ಸಮಾಧಾನಕ್ಕಾಗಿ ದೇವರ ಯೋಜನೆ — 48:1-66:24