ತೀತನಿಗೆ
ಗ್ರಂಥಕರ್ತೃತ್ವ
ಪೌಲನು ತನ್ನನ್ನು ತಾನು ತೀತನ ಪತ್ರಿಕೆಯ ಗ್ರಂಥಕರ್ತನೆಂದು ಗುರುತಿಸಿಕೊಂಡನು, ಅವನು ತನ್ನನ್ನು ದೇವರ ಸೇವಕನು ಮತ್ತು ಯೇಸುಕ್ರಿಸ್ತನ ಅಪೊಸ್ತಲನು ಎಂದು (1:1) ಕರೆದುಕೊಂಡನು. ತೀತನೊಂದಿಗಿನ ಪೌಲನ ಸಂಬಂಧದ ಉಗಮವು ಗೂಢರಹಸ್ಯವಾಗಿದೆ, ಆದರೆ ಅವನು ಪೌಲನ ಸೇವೆಯಡಿಯಲ್ಲಿ ಪರಿವರ್ತನೆ ಹೊಂದಿದವನಾಗಿರಬಹುದು, ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನು ಎಂದು ಅವನನ್ನು ಪೌಲನು ಕರೆದನು (1:4). ಪೌಲನು ತೀತನನ್ನು ಸುವಾರ್ತೆ ಸೇವೆಯಲ್ಲಿ ಸ್ನೇಹಿತನು ಮತ್ತು ಜೊತೆ ಕೆಲಸದವನು ಎಂದು ಬಹು ಗೌರವವುಳ್ಳವನಾಗಿ ಸ್ಪಷ್ಟವಾಗಿ ಎಣಿಸಿದನು, ಅವನ ಪ್ರೀತಿಗಾಗಿ, ಅವನ ಶ್ರದ್ಧೆಗಾಗಿ ಮತ್ತು ಇತರರಿಗೆ ಸಾಂತ್ವನವನ್ನು ಉಂಟುಮಾಡುವಂಥ ಅವನ ಕಾರ್ಯಕ್ಕಾಗಿ ತೀತನನ್ನು ಪ್ರಶಂಸಿದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 63-65 ರ ನಡುವೆ ಬರೆಯಲ್ಪಟ್ಟಿದೆ.
ಪೌಲನು ತನ್ನ ಮೊದಲ ರೋಮನ್ ಸೆರೆವಾಸದಿಂದ ಬಿಡುಗಡೆಗೊಂಡ ನಂತರ, ನಿಕೊಪೊಲಿಯಿಂದ ತೀತನಿಗೆ ಪತ್ರಿಕೆಯನ್ನು ಬರೆದನು. ಪೌಲನು ಎಫೆಸದಲ್ಲಿ ತಿಮೊಥೆಯನನ್ನು ಸೇವೆಮಾಡಲು ಬಿಟ್ಟು, ತೀತನನ್ನು ಕರೆದುಕೊಂಡು ಕ್ರೇತ್ ದ್ವೀಪಕ್ಕೆ ಹೋದನು.
ಸ್ವೀಕೃತದಾರರು
ಕ್ರೇತ್ ದ್ವೀಪದಲ್ಲಿರುವ, ಜೊತೆಕೆಲಸದವನು ಮತ್ತು ನಂಬಿಕೆಯಲ್ಲಿ ಮಗನು ಆದ, ತೀತನಿಗೆ.
ಉದ್ದೇಶ
ಕ್ರೇತ್ ದ್ವೀಪದ ನೂತನ ಸಭೆಗಳಲ್ಲಿದ್ದ ಕೆಲವು ಕುಂದುಕೊರತೆಗಳನ್ನು, ಸಂಘಟನೆಯ ಕೊರತೆಯನ್ನು ಮತ್ತು ಆಶಿಸ್ತಿನ ವರ್ತನೆಯುಳ್ಳ ಸದಸ್ಯರನ್ನು ಸರಿಪಡಿಸಲು, (1) ಹೊಸ ಹಿರಿಯರನ್ನು ನೇಮಕ ಮಾಡುವಂತೆ ಮತ್ತು (2) ಕ್ರೇತ್ ದ್ವೀಪದಲ್ಲಿರುವ ಅವಿಶ್ವಾಸಿಗಳ ಮುಂದೆ ನಂಬಿಕೆಯ ಉತ್ತಮ ಸಾಕ್ಷಿಯನ್ನು ನೀಡಲು ಸಿದ್ಧಪಡಿಸುವಂತೆ ಅವರಿಗೆ ಸಹಾಯ ಮಾಡಲು ತೀತನಿಗೆ ಸಲಹೆಯನ್ನು ನೀಡಲು ಬರೆದನು (1:5).
ಮುಖ್ಯಾಂಶ
ನಡವಳಿಕೆಯ ಕೈಪಿಡಿ
ಪರಿವಿಡಿ
1. ವಂದನೆಗಳು — 1:1-4
2. ಹಿರಿಯರ ನೇಮಕಾತಿ — 1:5-16
3. ವಿವಿಧ ವಯೋಮಾನದವರ ಕುರಿತಾದ ಆದೇಶ — 2:1-3:11
4. ಅಂತಿಮ ಮಾತುಗಳು — 3:12-15