ರೋಮಾಪುರದವರಿಗೆ
ಗ್ರಂಥಕರ್ತೃತ್ವ
ರೋಮಾಪುರದವರಿಗೆ ಬರೆದ ಪತ್ರಿಕೆಯ ಗ್ರಂಥಕರ್ತನು ಪೌಲನು ಎಂದು ರೋಮಾ 1:1 ಸೂಚಿಸುತ್ತದೆ, ರೋಮ್ನ ಚಕ್ರವರ್ತಿಯಾಗಿ 16 ವರ್ಷ ವಯಸ್ಸಿನ ನೀರೋ ಸಿಂಹಾಸನಕ್ಕೆ ಏರಿ ಕೇವಲ ಮೂರು ವರ್ಷಗಳಾದ ನಂತರ ಪೌಲನು ಗ್ರೀಕ್ ಪಟ್ಟಣವಾದ ಕೊರಿಂಥದಿಂದ ರೋಮಾಪುರದವರಿಗೆ ಈ ಪತ್ರಿಕೆಯನ್ನು ಬರೆದನು. ಪ್ರಮುಖವಾದ ಈ ಗ್ರೀಕ್ ಪಟ್ಟಣವು ಲೈಂಗಿಕ ಅನೈತಿಕತೆಯ ಮತ್ತು ವಿಗ್ರಹಾರಾಧನೆಯ ತಿಪ್ಪೆಗುಂಡಿಯಾಗಿತ್ತು. ಆದ್ದರಿಂದ ಪೌಲನು ರೋಮಾಪುರದವರಿಗೆ ಮನುಷ್ಯರ ಪಾಪದ ಅಥವಾ ಅದ್ಭುತವಾಗಿ ಮತ್ತು ಸಂಪೂರ್ಣವಾಗಿ ಜೀವನವನ್ನು ಬದಲಾಯಿಸುವ ದೇವರ ಕೃಪೆಯ ಶಕ್ತಿಯನ್ನು ಬಗ್ಗೆ ಬರೆಯುವಾಗ, ಅವನು ತಾನು ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆಂದು ಅವನಿಗೆ ತಿಳಿದಿತ್ತು. ಪೌಲನು ಕ್ರೈಸ್ತೀಯ ಸುವಾರ್ತೆಯ ಮೂಲಭೂತ ವಿಷಯಗಳ, ಎಲ್ಲಾ ಪ್ರಮುಖ ಅಂಶಗಳನ್ನು ತಾಕುತ್ತಾ ಮುಖ್ಯಾಂಶದ ರೂಪುರೇಖೆಯನ್ನು ರಚಿಸುತ್ತಾನೆ: ದೇವರ ಪವಿತ್ರತೆ, ಮಾನವಕುಲದ ಪಾಪ, ಮತ್ತು ಯೇಸು ಕ್ರಿಸ್ತನಿಂದ ಒದಗಿಸಲ್ಪಟ್ಟ ರಕ್ಷಿಸುವ ಕೃಪೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 57 ರ ನಡುವೆ ಕೊರಿಂಥದಿಂದ ಬರೆಯಲ್ಪಟ್ಟಿದೆ.
ಬರವಣಿಗೆಯ ಪ್ರಮುಖ ಸ್ಥಳ ರೋಮ್ ಆಗಿರಬಹುದು.
ಸ್ವೀಕೃತದಾರರು
ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ಹಾಗು ದೇವಜನರಾಗುವುದಕ್ಕೆ ಕರೆಯಲ್ಪಟ್ಟವರೂ ಆಗಿರುವವರೆಲ್ಲರಿಗೆ, ಅಂದರೆ ರೋಮ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ರೋಮಾಪುರದ ಸಭೆಯ ಸದಸ್ಯರೆಲ್ಲರಿಗೆ (ರೋಮಾ 1:7).
ಉದ್ದೇಶ
ರೋಮಾಪುರದವರಿಗೆ ಬರೆದ ಪತ್ರಿಕೆಯು ಕ್ರೈಸ್ತೀಯ ಸಿದ್ಧಾಂತದ ಸ್ಪಷ್ಟವಾದ ಮತ್ತು ಅತ್ಯಂತ ವ್ಯವಸ್ಥಿತವಾದ ನಿರೂಪಣೆಯಾಗಿದೆ. ಎಲ್ಲಾ ಮನುಷ್ಯರ ಪಾಪಿಷ್ಠತೆಯನ್ನು ಚರ್ಚಿಸುವುದರ ಮೂಲಕ ಪೌಲನು ಪ್ರಾರಂಭಿಸಿದನು. ದೇವರ ವಿರುದ್ಧವಾಗಿರುವ ನಮ್ಮ ದಂಗೆಯಿಂದಾಗಿ ಎಲ್ಲ ಮನುಷ್ಯರನ್ನು ಖಂಡಿಸಲಾಯಿತು. ಆದರೂ, ದೇವರು ತನ್ನ ಕೃಪೆಯಿಂದ ತನ್ನ ಮಗನಾದ ಯೇಸುವಿನಲ್ಲಿಡುವ ನಂಬಿಕೆಯ ಮೂಲಕ ನಮಗೆ ನೀತಿಕರಣವನ್ನು ನೀಡುತ್ತಾನೆ. ನಾವು ದೇವರಿಂದ ನೀತಿಕರಿಸಲ್ಪಟ್ಟಾಗ, ಕ್ರಿಸ್ತನ ರಕ್ತವು ನಮ್ಮ ಪಾಪವನ್ನು ಮುಚ್ಚುವುದ್ದರಿಂದ ನಾವು ವಿಮೋಚನೆಯನ್ನು ಅಥವಾ ರಕ್ಷಣೆಯನ್ನು ಹೊಂದಿಕೊಳ್ಳುತ್ತೇವೆ. ಈ ವಿಷಯಗಳ ಬಗೆಗಿನ ಪೌಲನ ಪ್ರತಿಪಾದನೆಯು ಒಬ್ಬ ವ್ಯಕ್ತಿಯು ತನ್ನ ಪಾಪದ ಶಿಕ್ಷೆಯಿಂದ ಮತ್ತು ಅವನ ಅಥವಾ ಅವಳ ಪಾಪದ ಶಕ್ತಿಯಿಂದ ಹೇಗೆ ರಕ್ಷಿಸಲ್ಪಡುವುದು ಎಂಬ ತಾರ್ಕಿಕವಾದ ಮತ್ತು ಸಂಪೂರ್ಣವಾದ ನಿರೂಪಣೆಯನ್ನು ನೀಡುತ್ತದೆ.
ಮುಖ್ಯಾಂಶ
ದೇವರ ನೀತಿ
ಪರಿವಿಡಿ
1. ಪಾಪದ ಖಂಡನೆಯ ಸ್ಥಿತಿ ಮತ್ತು ನೀತಿಯ ಅವಶ್ಯಕತೆ — 1:18-3:20
2. ನೀತಿಯು ನೀತಿಕರಣವನ್ನು ಉಂಟುಮಾಡುತ್ತದೆ — 3:21-5:21
3. ನೀತಿಯು ಪವಿತ್ರೀಕರಣವನ್ನು ನೀಡುತ್ತದೆ — 6:1-8:39
4. ಇಸ್ರಾಯೇಲರಿಗೆ ದೈವಿಕ ಒದಗಿಸುವಿಕೆ — 9:1-11:36
5. ನೀತಿಯ ನಡವಳಿಕೆಯನ್ನು ಕಾರ್ಯಗತಗೊಳಿಸುವುದು — 12:1-15:13
6. ಸಮಾಪ್ತಿ: ವೈಯಕ್ತಿಕ ಸಂದೇಶ — 15:14-16:27