ಪ್ರಸಂಗಿ
ಗ್ರಂಥಕರ್ತೃತ್ವ
ಪ್ರಸಂಗಿಯ ಗ್ರಂಥವು ಅದರ ಗ್ರಂಥಕರ್ತನನ್ನು ಪ್ರತ್ಯಕ್ಷವಾಗಿ ಗುರುತಿಸುವುದಿಲ್ಲ. ಪ್ರಸಂಗಿ 1:1 ರಲ್ಲಿ ಕ್ಹೊಹೆಲೆಥ್ ಎಂಬ ಹೀಬ್ರೂ ಪದದಿಂದ ಗ್ರಂಥಕರ್ತನು ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ, ಆ ಪದವನ್ನು “ಪ್ರಸಂಗಿ” ಎಂದು ಅನುವಾದಿಸಲಾಗಿದೆ. ದಾವೀದನ ಮಗನೂ ಯೆರೂಸಲೇಮಿನಲ್ಲಿ ಆಳುವ ಅರಸನೂ, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡವನು, ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ ಕ್ರಮಪಡಿಸಿದನು ಎಂದು ತನ್ನನ್ನು ತಾನು ಕರೆದುಕೊಳ್ಳುತ್ತಾನೆ (ಪ್ರಸಂಗಿ 1:1,16; 12:9). ದಾವೀದನ ಏಕೈಕ ಮಗನಾಗಿದ್ದ ಸೊಲೊಮೋನನು ಆ ಪಟ್ಟಣದಿಂದ ಎಲ್ಲಾ ಇಸ್ರಾಯೇಲ್ಯರನ್ನು ಆಳುವುದಕ್ಕಾಗಿ ದಾವೀದನ ನಂತರ ಯೆರೂಸಲೇಮಿನಲ್ಲಿ ಸಿಂಹಾಸನವನ್ನೇರಿದ್ದನು (1:12). ಸೊಲೊಮೋನನ್ನೇ ಈ ಪುಸ್ತಕವನ್ನು ಬರೆದಿದ್ದಾನೆಂದು ಸೂಚಿಸುವ ಕೆಲವೇ ಕೆಲವು ವಚನಗಳಿವೆ. ಸೊಲೊಮೋನನ ಮರಣದ ನಂತರ, ಬಹುಶಃ ನೂರಾರು ವರ್ಷಗಳ ನಂತರ ಈ ಪುಸ್ತಕವನ್ನು ವಿಭಿನ್ನ ವ್ಯಕ್ತಿಯು ಬರೆದಿರಬಹುದು ಎಂದು ಸೂಚಿಸುವಂಥ ಕೆಲವು ಸುಳಿವುಗಳು ಸನ್ನಿವೇಶದಲ್ಲಿವೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 940-931 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಹುಶಃ ಪ್ರಸಂಗಿಯ ಪುಸ್ತಕವು ಸೊಲೊಮೋನನ ಆಳ್ವಿಕೆಯ ಅಂತ್ಯಕಾಲದಲ್ಲಿ ಬರೆಯಲ್ಪಟ್ಟಿರಬಹುದು, ಇದು ಯೆರೂಸಲೇಮಿನಲ್ಲಿ ಬರೆಯಲ್ಪಟ್ಟಿದೆ ಎಂದು ತೋರುತ್ತದೆ.
ಸ್ವೀಕೃತದಾರರು
ಪ್ರಸಂಗಿಯ ಪುಸ್ತಕವು ಪ್ರಾಚೀನ ಇಸ್ರಾಯೇಲ್ಯರಿಗಾಗಿ ಮತ್ತು ನಂತರದ ಎಲ್ಲಾ ಸತ್ಯವೇದದ ಓದುಗರಿಗಾಗಿ ಬರೆಯಲಾಯಿತ್ತು.
ಉದ್ದೇಶ
ಈ ಪುಸ್ತಕವು ನಮಗೆ ಕಠಿಣ ಎಚ್ಚರಿಕೆಯಾಗಿ ನಿಲ್ಲುತ್ತದೆ. ಗೊತ್ತುಗುರಿಯಿಲ್ಲದೆ ಮತ್ತು ದೇವರ ಭಯವಿಲ್ಲದೆ ಜೀವಿಸುವ ಜೀವನವು ನಿರರ್ಥಕವಾದುದು, ಮತ್ತು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವಾದುದು ಆಗಿದೆ. ನಾವು ಸುಖಸಂತೋಷ, ಸಂಪತ್ತು, ಸೃಜನಶೀಲ ಚಟುವಟಿಕೆ, ಜ್ಞಾನ ಅಥವಾ ಸರಳವಾದ ಆನಂದವನ್ನು ಹಿಂದಟ್ಟಿದರೂ, ನಾವು ಜೀವನದ ಅಂತ್ಯಕ್ಕೆ ಬರುತ್ತೇವೆ ಮತ್ತು ನಮ್ಮ ಜೀವನವನ್ನು ವ್ಯರ್ಥವಾಗಿ ಜೀವಿಸಿದ್ದೇವು ಎಂದು ಕಂಡುಕೊಳ್ಳುತ್ತೇವೆ. ದೇವರ ಮೇಲೆ ಕೇಂದ್ರೀಕೃತವಾಗಿರುವ ಜೀವನದ ಮೂಲಕ ಮಾತ್ರವೇ ಜೀವನಕ್ಕೆ ಅರ್ಥ ಬರುತ್ತದೆ.
ಮುಖ್ಯಾಂಶ
ದೇವರಿಗೆ ಬೇರೆಯಾದ ಸಕಲವು ವ್ಯರ್ಥ
ಪರಿವಿಡಿ
1. ಪೀಠಿಕೆ — 1:1-11
2. ಜೀವನದ ವಿವಿಧ ಅಂಶಗಳ ವ್ಯರ್ಥತೆ — 1:12-5:7
3. ದೇವರ ಭಯ — 5:8-12:8
4. ಅಂತಿಮ ಸಮಾಪ್ತಿ — 12:9-14